Essay On Library In Kannada | ಗ್ರಂಥಾಲಯದ ಮಹತ್ವ ಪ್ರಬಂಧ

Essay On Library In Kannada (ಗ್ರಂಥಾಲಯದ ಅರ್ಥ, ಗ್ರಂಥಾಲಯ ಪಿತಾಮಹ, ಗ್ರಂಥಾಲಯದ ವಿಧಗಳು, ಗ್ರಂಥಾಲಯ ಮಹತ್ವ ಪ್ರಬಂಧ, ಗ್ರಂಥಾಲಯ ದಿನಾಚರಣೆ ಮತ್ತು ಅನುಕೂಲಗಳು)

ಪೀಠಿಕೆ: 

ನಾವೆಲ್ಲರೂ ಗ್ರಂಥಾಲಯಕ್ಕೆ ಒಂದಿಲ್ಲೊಂದು ಕಾರಣಕ್ಕೆ ಹೋಗಿಯೇ ಇರುತ್ತೇವೆ. ಯಾವುದೋ ಪುಸ್ತಕ, ಸಂಶೋಧನೆ, ಉನ್ನತ ವ್ಯಾಸಂಗ, ಪುಸ್ತಕ ಓದುವ ಹವ್ಯಾಸ ಹೀಗೆ ಕಾರಣ ಏನೇ ಇರಬಹುದು. ಆದರೆ ಸದಾ ಪೀಂಡ್ರಾಪ್ ಸೈಲೆನ್ಸ್ ನಲ್ಲಿರುವ ಗ್ರಂಥಾಲಯ ಶಿಕ್ಷಣ ಪಡೆದ ಎಲ್ಲರ ಪಾಲಿಗೆ ದೇವಾಲಯವಿದ್ದಂತೆ. 

ಸಾಲು ಸಾಲಾಗಿ ಜೋಡಿಸಿಟ್ಟ ಪುಸ್ತಕಗಳು, ಸಾಲಾಗಿ ಹಾಕಿದ ಕುರ್ಚಿಗಳ ಮೇಲೆ ಸದ್ದು ಮಾಡದೇ ಪುಸ್ತಕದಲ್ಲಿ ತಲೆ ತೂರಿಸಿಕೊಂಡು ತಮ್ಮದೇ ಜಗತ್ತಿನಲ್ಲಿ ಮುಳುಗಿದವರನ್ನು ನೋಡಿದಾಗ ನಮ್ಮ ಮನಸ್ಸು ಕೂಡ ಉಶ್ ! ಸದ್ದು ಮಾಡಬೇಡ ಎನ್ನುತ್ತೆ. ವಿದ್ಯಾರ್ಥಿ ದೆಸೆಯಿಂದಲೇ ಪುಸ್ತಕ ಓದುವ ಹಾಗೂ ಗ್ರಂಥಾಲಯದ ನಂಟು ಬೆಳೆದರೆ ಆ ವಿದ್ಯಾರ್ಥಿ ಜ್ಞಾನದ ಹೂರಣವನ್ನೇ ಹೊಂದಬಲ್ಲ.

ನಾವು ಗ್ರಂಥಾಲಯದ ಒಳಗೆ ಕಾಲಿಟ್ಟಾಗ ‘ಕೈ ಮುಗಿದು ಒಳಗೆ ಬಾ ಜ್ಞಾನ ದೇಗುಲವಿದು’ ಎಂಬ ಸಾಲು ನಮ್ಮನ್ನು ಅಪ್ಪುತ್ತದೆ. ಗೋಡೆಯ ಮೇಲೆ ಬರೆದಿರುವ ಸಾಹಿತಿಗಳ ವ್ಯಾಖ್ಯಾನಗಳು, ಚಿತ್ರಗಳು ಸೆಳೆಯುತ್ತವೆ. 

“ಜ್ಞಾನದ ಬಲದಿಂದ ಅಜ್ಞಾನದ ಕೇಡು, ಜ್ಯೋತಿಯ ಬಲದಿಂದ ತಮಂಧದ ಕೇಡು” ಎಂಬ ಜಗಜ್ಯೋತಿ ಬಸವಣ್ಣನವರ ವಾಣಿ ಇಂದಿಗೂ ಚಿರಪರಿಚಿತವಾಗಿದೆ. ಎಲ್ಲೆಲ್ಲೂ ತುಂಬಿರುವ ಅಜ್ಞಾನವನ್ನು ಜ್ಞಾನ ತೆಗೆದು ಬಿಸಾಕುತ್ತದೆ. ಹಾಗೆಯೇ ಎಲ್ಲೆಲ್ಲೂ ಆವರಿಸಿರುವ ಕತ್ತಲನ್ನು ದೀಪ ಕಳೆಯುತ್ತದೆ. 

ಅಂದರೆ ವ್ಯಕ್ತಿ ಪಡೆದುಕೊಳ್ಳುವ ಜ್ಞಾನ ಆತನ ಜೀವನವನ್ನೂ ಕೊನೆಯವರೆಗೂ ಕೈ ಹಿಡಿದು ಬೆಳಗುತ್ತದೆ. ಇಂತಹ ಜ್ಞಾನ ಸಿಗುವುದು ಗ್ರಂಥಗಳ ಭಂಡಾರವನ್ನು ಹಾಸು ಹೊದ್ದಿರುವ ಗ್ರಂಥಾಲಯಗಳಲ್ಲಿ. ಹಾಗಾದರೆ ಗ್ರಂಥಾಲಯ ಎಂದರೇನು? ಗ್ರಂಥಗಳನ್ನು ಹೊಂದಿರುವ ಕೋಣೆಯಾ? ಅಲ್ಲ. ಗ್ರಂಥಾಲಯ ತನ್ನದೇ ಆದ ನಿರ್ದಿಷ್ಟ ಅರ್ಥವನ್ನು ಹೊಂದಿದೆ.

ವಿಷಯ ಬೆಳವಣಿಗೆ:


Essay On Library In Kannada Language ಗ್ರಂಥಾಲಯದ ಅರ್ಥ

ಗ್ರಂಥಾಲಯ ಪದವನ್ನು ಬಿಡಿಸಿ ಬರೆದಾಗ ಅಂದರೆ ಗ್ರಂಥ+ಆಲಯ ಆಗುತ್ತದೆ. ಗ್ರಂಥ ಎಂದರೆ ಪುಸ್ತಕ, ಆಲಯ ಎಂದರೆ ಸ್ಥಳ. ಒಟ್ಟಾರೆ ಅರ್ಥ ‘ಪುಸ್ತಕಗಳನ್ನು ಹೊಂದಿರುವ  ಸ್ಥಳವೇ’ ಗ್ರಂಥಾಲಯ.

ಹಾಗಾದರೆ ನಾಲ್ಕೈದು ಪುಸ್ತಕಗಳನ್ನು ಜೋಡಿಸಿಟ್ಟ ಕೂಡಲೇ ಅದು ಗ್ರಂಥಾಲಯ ಆಗುತ್ತದೆಯಾ? ಇಲ್ಲ. ಗ್ರಂಥಾಲಯದಲ್ಲಿ ಹಲವು ವಿಷಯಗಳ ಪುಸ್ತಕಗಳ ನಿಘಂಟು ಇರುತ್ತದೆ. ಎಲ್ಲಿಯೂ ಸಿಗದ, ಅತ್ಯಂತ ಪ್ರಾಚೀನ ಪುಸ್ತಕಗಳ ಸಂಗ್ರಹವಿರುತ್ತದೆ. ನೂರಾರು ಸಾಹಿತಿಗಳು ಬರೆದ ವಿವಿಧ ಕ್ಷೇತ್ರಗಳಿಗೆ ಸಂಬಂಧಪಟ್ಟ ಜ್ಞಾನದ ಆಗರವನ್ನೇ ಗ್ರಂಥಾಲಯ ಹೊಂದಿರುತ್ತದೆ.

ಗ್ರಂಥಾಲಯದಲ್ಲಿ ನಿರ್ವಾಹಕರು, ಗ್ರಂಥ ಪಾಲಕರು ಪುಸ್ತಕಗಳನ್ನು ಅಂದವಾಗಿ ಜೋಡಿಸಿಟ್ಟು, ಬರುವವರಿಗೆ ಪುಸ್ತಕ ನೀಡುವುದು, ವಾಪಸ್ ಪಡೆಯುವ ಪ್ರಕ್ರಿಯೆ ನಡೆಸುತ್ತಿರುತ್ತಾರೆ. ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಪುಸ್ತಕಗಳು ವರ್ಗಾವಣೆ ಆಗುತ್ತವೆ. ಹೀಗಾಗಿ ಗ್ರಂಥಾಲಯದ ನಿರ್ವಹಣೆ ಪ್ರಮುಖ ಪಾತ್ರ ವಹಿಸುತ್ತದೆ. 

ಸ್ವಂತ ಹಣ ಕೊಟ್ಟು ಪುಸ್ತಕ ಖರೀದಿ ಮಾಡಲಾಗದವರು, ಗ್ರಂಥಾಲಯವನ್ನು ಅವಲಂಬಿಸುತ್ತಾರೆ. ವಿರಳವಾದ ಮಾಹಿತಿಗಳು ಗ್ರಂಥಾಲಯದಲ್ಲಿ ಸಿಗುತ್ತವೆ. ಕಲೆ, ವಾಣಿಜ್ಯ, ಸ್ವಾತಂತ್ರ್ಯ ನಂತರದಲ್ಲಿ ದೇಶದ ಸ್ಥಿತಿಗತಿ, ಕೈಗಾರಿಕೀಕರಣ, ಕರ್ನಾಟಕದ ಏಕೀಕರಣ, ರಾಜ್ಯಗಳ ಉದಯ ಹೀಗೆ ಸಾವಿರಾರು ಸಂಗತಿಗಳ ಸಂಪೂರ್ಣ ಮಾಹಿತಿಯನ್ನು ಒದಗಿಸುವ ಪುಸ್ತಕಗಳು ಗ್ರಂಥಾಲಯದಲ್ಲಿ ಲಭಿಸುತ್ತವೆ. 

ಗ್ರಂಥಾಲಯ ಪಿತಾಮಹ ಎಂಬ ಕೀರ್ತಿಗೆ ವಿಜ್ಞಾನಿ ಎಸ್. ಆರ್. ರಂಗನಾಥನ್ ಭಾಜನರಾಗಿದ್ದಾರೆ. ಗ್ರಂಥಾಲಯಕ್ಕೆ ಒಂದು ವೈಜ್ಞಾನಿಕ ಸ್ವರೂಪ ನೀಡಿದವರು ಎಸ್. ಆರ್. ರಂಗನಾಥನ್. ಪದ್ಮಶ್ರೀ ಪುರಸ್ಕೃತ ರಂಗನಾಥನ್ ಅವರ ಪೂರ್ಣ ಹೆಸರು ಶಿಯ್ಯಾಳಿ ರಾಮಾಮೃತ ರಂಗನಾಥನ್. 12 ಆಗಸ್ಟ್ 1892 ರಂದು ತಮಿಳುನಾಡಿನ ತಂಜಾವೂರು ಜಿಲ್ಲೆಯ ಶಿಯ್ಯಾಳಿ ಎಂಬ ಗ್ರಾಮದಲ್ಲಿ ಜನಿಸಿದರು. 

ತಂದೆ ರಾಮಾಮೃತ ಅಯ್ಯರ್, ತಾಯಿ ಸೀತಾಲಕ್ಷ್ಮಿ. ರಂಗನಾಥನ್ ಗ್ರಂಥಾಲಯ ವಿಜ್ಞಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಗ್ರಂಥಾಲಯ ಆಡಳಿತ ಮತ್ತು ನಿರ್ವಹಣೆ, ವರ್ಗೀಕರಣ, ಸೂಚೀಕರಣ, ನಿರ್ದೇಶೀಕರಣ ಸೇವೆ, ಪ್ರಲೇಖನ ಸೇವೆಯನ್ನು ಒದಗಿಸಿ ಕೊಟ್ಟವರು ರಂಗನಾಥನ್. 

ಪುಸ್ತಕ ಓದುವ ಹವ್ಯಾಸ ವ್ಯಕ್ತಿಯ ಒಂಟಿತನವನ್ನು ದೂರ ಮಾಡುತ್ತದೆ. ಏಕಾಂತದ ಭಾವ, ಮನಸ್ಸೊಳಗೆ ಮೂಡುವ ಕಲ್ಪನೆ, ಓದುತ್ತಿರುವ ಕಥೆಗೂ ಮನಸ್ಸಲ್ಲಿ ಮೂಡುತ್ತ ಹೋಗುವ ಚಿತ್ರಣಕ್ಕೂ ನಂಟಿದೆ. ಅದು ಆಳವಾದ ಅಧ್ಯಯನಕ್ಕೆ ಸಾಕ್ಷಿಯಾಗಿದೆ. ವ್ಯಕ್ತಿಯನ್ನು ಆಳವಾಗಿ ಆಲೋಚಿಸುವಂತೆ ಮಾಡುವ ತಾಕತ್ತು ಪುಸ್ತಕಗಳಿಗಿದೆ. 

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಓದಿದ ‘ಸತ್ಯ ಹರಿಶ್ಚಂದ್ರ ಕಥೆ’ ಅವರ ಬದುಕಿನ ಆಲೋಚನೆಯ ದಿಕ್ಕನ್ನೇ ಬದಲಿಸಿ ಹಾಕಿತ್ತು. ಜಗತ್ತಿನಲ್ಲಿ ಅತಿ ಹೆಚ್ಚು ಗ್ರಂಥಗಳನ್ನು ಓದಿದ ಕೀರ್ತಿಗೆ ಪಾತ್ರರಾದವರು ಡಾ.ಬಿ.ಆರ್.ಅಂಬೇಡ್ಕರ್. ಇದು ಭಾರತೀಯರು ಹೆಮ್ಮೆ ಪಡುವ ಹಾಗೂ ಮಹತ್ವದ ಸಂಗತಿಯಾಗಿದೆ.

ಅಂಬೇಡ್ಕರ್ ಅವರ ಪುಸ್ತಕ ಸಂಸ್ಕೃತಿ ಅವರನ್ನು ಸಾಮಾನ್ಯನಿಂದ ಅಸಾಮಾನ್ಯ ವ್ಯಕ್ತಿಯನ್ನಾಗಿಸಿತು.  ಅಮೆರಿಕದ ಗ್ರಂಥಾಲಯದಲ್ಲಿ ಇರುವ ಎಲ್ಲಾ ಪುಸ್ತಕಗಳನ್ನು ಓದಿದ ದಾಖಲೆ ಮತ್ತು ಅತಿ ಹೆಚ್ಚು ಪದವಿಗಳನ್ನು ಗಳಿಸಲು ಅಂಬೇಡ್ಕರ್ ಅವರ ಪುಸ್ತಕ ಪ್ರೇಮವೇ ಕಾರಣವಾಗಿತ್ತು. 

“ಇಡೀ ಜಗತ್ತು ನಿಂತಿರುವುದೇ ಗ್ರಂಥ ಭಂಡಾರದ ಮೇಲೆ” ಎಂಬ ಮಾತಿದೆ. ಜಗತ್ತನ್ನು ಆಳಿದ ಸಾವಿರಾರು ಮಹಾಪುರುಷರು, ಜ್ಞಾನಿಗಳು, ಪಂಡಿತರು, ವಿಜ್ಞಾನಿಗಳು, ಸಾಧು, ಸಂತರು, ಇತಿಹಾಸ ಪುರುಷರು, ವಚನಕಾರರು, ದಾರ್ಶನಿಕರ, ಶರಣರ ಸಾಲುಗಳು ಇಂದಿಗೂ ಜನಮಾನಸದಲ್ಲಿ ಚಿರಪರಿಚಿತರಾಗಿದ್ದಾರೆ ಎಂದರೆ ಅದಕ್ಕೆ ಪ್ರಮುಖ ಕಾರಣ ಗ್ರಂಥಗಳು. ಸಾಧಕರ ಬಗ್ಗೆ ಬರೆದ ಜೀವನಚರಿತ್ರೆ, ಸಾಹಸ ಚರಿತ್ರೆಯಂಥ ಪುಸ್ತಕಗಳೇ ಕಾರಣ. 

ಸಾಹಿತಿಗಳಾದ ಕುವೆಂಪು, ದ.ರಾ.ಬೇಂದ್ರೆ, ಪೂರ್ಣಚಂದ್ರ ತೇಜಸ್ವಿ, ಪಿ.ಲಂಕೇಶ್, ಪು.ತಿ.ನರಸಿಂಹಾಚಾರ್ಯ, ಗಿರೀಶ್ ಕಾರ್ನಾಡ್, ಶಿವರಾಮ ಕಾರಂತರು, ಡಿವಿಜಿ, ಪಾಟೀಲ ಪುಟ್ಟಪ್ಪ ಹಾಗೂ ಅನೇಕರು ಬರೆದಿರುವ ವಿಮರ್ಶೆ, ಕಥೆ, ಕಾದಂಬರಿ, ಚುಟುಕು, ಕವನಗಳ ಪುಸ್ತಕಗಳು ಗ್ರಂಥಾಲಯದಲ್ಲಿ ಸಿಗುತ್ತವೆ.

ಇತಿಹಾಸಕಾರರು ಬರೆದ ಐತಿಹಾಸಿಕ ಕಥನಗಳ ಸಂಗ್ರಹ, ಶಿಲಾಯುಗ, ಮಧ್ಯಯುಗ ಮತ್ತು ಪುರಾತನ ದೇವಾಲಯಗಳು, ಕೆತ್ತನೆಯ ಇತಿಹಾಸ ಪುಸ್ತಕಗಳು ಕೂಡ ಗ್ರಂಥಾಲಗಳಲ್ಲಿ ಸಿಗುತ್ತವೆ. 

ಭಾರತದ ಸಂಪೂರ್ಣ ವ್ಯವಸ್ಥೆ ನಿಂತಿರುವುದೇ ಸಂವಿಧಾನ ಗ್ರಂಥದ ಮೇಲೆ. ಸಾಮಾಜಿಕ, ರಾಜಕೀಯ, ಧಾರ್ಮಿಕ, ಕೌಟುಂಬಿಕ, ಆರ್ಥಿಕ ವ್ಯವಸ್ಥೆಗಳು ಸಂವಿಧಾನವನ್ನು ಆಧರಿಸಿವೆ.

ವಿದ್ಯಾರ್ಥಿಗಳು ತಮ್ಮ ಹೆಚ್ಚಿನ ಜ್ಞಾನಾರ್ಜನೆ ಮಾಡಿಕೊಳ್ಳಲೆಂದೇ ಗ್ರಂಥಾಲಯಗಳು ಹೆಚ್ಚು ಹೆಚ್ಚು ರಚಿಸಲ್ಪಟ್ಟವು. ಪ್ರತಿಯೊಂದು ಶಾಲೆ, ಕಾಲೇಜುಗಳು ಮತ್ತು ಹಳ್ಳಿ, ನಗರಗಳಲ್ಲಿ ಗ್ರಂಥಾಲಯಗಳು ಇದ್ದೇ ಇವೆ.

ಗ್ರಂಥಾಲಯ ಸಾಹಿತ್ಯ, ಭಾಷೆ, ಪರಂಪರೆ, ಧರ್ಮ, ನ್ಯಾಯಾಂಗ ವ್ಯವಸ್ಥೆ, ಮಹಾಕಾವ್ಯಗಳು, ವಿಜ್ಞಾನ-ತಂತ್ರಜ್ಞಾನ, ಕಥೆ, ಕಾದಂಬರಿ, ಜೀವನಚರಿತ್ರೆ, ಸ್ವಾತಂತ್ರ್ಯ ಸಂಗ್ರಾಮ ಹೀಗೆ ಪ್ರತಿಯೊಂದು ಮಾಹಿತಿ ಸಿಗುವುದೇ ಗ್ರಂಥಾಲಯದಲ್ಲಿ.

ಇಷ್ಟೆಲ್ಲಾ ಜ್ಞಾನ ಸಂಪತ್ತನ್ನು ಹೊಂದಿರುವ ಗ್ರಂಥಾಲಯಗಳನ್ನು ಆರು ವಿಧಗಳನ್ನಾಗಿ ವಿಂಗಡಿಸಲಾಗಿದೆ. 


ಗ್ರಂಥಾಲಯದ ಆರು ವಿಧಗಳು

ಗ್ರಂಥಾಲಯವನ್ನು ಪ್ರಮುಖವಾಗಿ ಆರು ವಿಧಗಳನ್ನಾಗಿ ವಿಂಗಡಿಸಲಾಗಿದೆ. ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಗ್ರಂಥಾಲಯದ ಸ್ವರೂಪ ಮತ್ತು ಡಿಜಿಟಲ್ ಗ್ರಂಥಾಲಯಗಳು ಹುಟ್ಟಿಕೊಂಡಿದ್ದು, ಓದುಗರಿಗೆ ಇನ್ನಷ್ಟು ಅನುಕೂಲ ಮಾಡಿ ಕೊಟ್ಟಿವೆ. 

1. ಸಾರ್ವಜನಿಕ ಗ್ರಂಥಾಲಯ

ಸಾರ್ವಜನಿಕ ಗ್ರಂಥಾಲಯವನ್ನು “ ಶ್ರೀ ಸಾಮಾನ್ಯರ ವಿಶ್ವವಿದ್ಯಾಲಯ” ಎಂದು ಕರೆಯಲಾಗಿದೆ. ಸಾರ್ವಜನಿಕವಾಗಿ ಸಮುದಾಯಗಳಲ್ಲಿ ವಿದ್ಯೆ, ಜ್ಞಾನ, ಓದಿನ ಬಗ್ಗೆ ಆಸಕ್ತಿ ಮತ್ತು ಅಭಿರುಚಿ ಬೆಳೆಸಲು ಉದ್ದೇಶಿಸಿ ಸ್ಥಾಪನೆ ಮಾಡಿರುವ ಮುಕ್ತ ಸಾರ್ವಜನಿಕ ವ್ಯವಸ್ಥೆಯೇ ಈ ಸಾರ್ವಜನಿಕ ಗ್ರಂಥಾಲಯಗಳು.

ಸಾರ್ವಜನಿಕರ ಓದಿಗಾಗಿ ನಿರ್ಮಾಣವಾಗಿರುವ ಗ್ರಂಥಾಲಯಗಳನ್ನು ಸಾರ್ವಜನಿಕ ಗ್ರಂಥಾಲಯ ಎಂದು ಕರೆಯುತ್ತಾರೆ. ಇಲ್ಲಿ ಎಲ್ಲರಿಗೂ ಮುಕ್ತವಾಗಿ ಪುಸ್ತಕ ಓದಲು ಮತ್ತು ಪಡೆಯಲು ಅವಕಾಶವಿರುತ್ತದೆ.

ಶ್ರೀಸಾಮಾನ್ಯನ ಓದಿಗಾಗಿ ಸಾರ್ವಜನಿಕ ಗ್ರಂಥಾಲಯಗಳ ಪಾತ್ರ ಮತ್ತು ಕೊಡುಗೆ ಮಹತ್ವದ್ದಾಗಿದೆ. ಗ್ರಂಥಾಲಯ ಇಲಾಖೆಯು ಪ್ರತಿಯೊಬ್ಬರಿಗೂ ಪುಸ್ತಕಗಳ ಜ್ಞಾನ ದೊರೆಯುವಂತೆ ಮಾಡಿದೆ. 

2. ಖಾಸಗಿ ಗ್ರಂಥಾಲಯ

ಖಾಸಗಿ ಗ್ರಂಥಾಲಯ ವ್ಯಕ್ತಿಯ ಸದಭಿರುಚಿಯ ಭಾಗವಾಗಿದೆ. ಯಾರಿಗೆ ತುಂಬಾ ಓದುವ, ಬರೆಯುವ ಹವ್ಯಾಸವಿರುತ್ತದೆಯೋ ಅಂಥವರು ಮನೆ ಅಥವಾ ಆಫೀಸುಗಳಲ್ಲಿ ಪುಸ್ತಕಗಳ ಸಂಗ್ರಹ ಮಾಡಿ ಅದಕ್ಕೆಂದೇ ಸ್ಥಳವನ್ನು ನಿಗದಿಪಡಿಸುತ್ತಾರೆ.

ವೈದ್ಯರು, ವಕೀಲರು, ಸಾಹಿತಿಗಳು, ಇತಿಹಾಸಕಾರರು ಹೀಗೆ ವೃತ್ತಿ ಮತ್ತು ಪ್ರವೃತ್ತಿಗಾಗಿ ಪುಸ್ತಕ ಸಂಗ್ರಹ, ಪುಸ್ತಕ ಓದುವ ಮತ್ತು ಮಾಹಿತಿ ನೀಡಲು ಬಯಸಿದ ಯಾರು ಬೇಕಾದರೂ ಗ್ರಂಥಾಲಯ ಹೊಂದಬಹುದಾಗಿದೆ. ಒಟ್ಟಾರೆಯಾಗಿ ಇದು ವ್ಯಕ್ತಿಗತ ಗ್ರಂಥಾಲಯವಾಗಿರುತ್ತದೆ. 

3. ರಾಷ್ಟ್ರೀಯ ಗ್ರಂಥಾಲಯ

ರಾಷ್ಟ್ರೀಯ ಗ್ರಂಥಾಲಯ ವಿಶ್ವಮಟ್ಟದ ಪುಸ್ತಗಳ ಸಂಗ್ರಹವನ್ನು ಒಳಗೊಂಡಿರುತ್ತದೆ. ಇಲ್ಲಿ ಎಲ್ಲಾ ಭಾಷೆಯ ಪುಸ್ತಕಗಳ ಸಂಗ್ರವಿರುತ್ತದೆ. ವಿಶ್ವದ ಎಲ್ಲಾ ಪ್ರಮುಖ ಲೇಖಕರ ಕೃತಿಗಳನ್ನು ಇಲ್ಲಿ ನಾವು ಕಾಣಬಹುದಾಗಿದೆ. 

4. ಸಂಚಾರಿ ಗ್ರಂಥಾಲಯ

ಸಂಚಾರಿ ಗ್ರಂಥಾಲಯ ಎಂದರೆ ಒಂದು ವಾಹನದಲ್ಲಿ ವಿವಿಧ ವಯೋಮಾನದವರಿಗೆ ಬೇಕಾದ ಪುಸ್ತಕಗಳನ್ನು ಹೊಂದಿದ ವಾಹನ ಓಣಿ ಹಾಗೂ ಏರಿಯಾಗಳಲ್ಲಿ ಹೋಗಿ ಪುಸ್ತಕ ಓದುಗರಿಗೆ ಪುಸ್ತಕ ತಲುಪಿಸುವುದೇ ಸಂಚಾರಿ ಗ್ರಂಥಾಲಯ ಆಗಿದೆ.

ಈ ಪರಿಕಲ್ಪನೆ ಇತ್ತೀಚೆಗೆ ಹುಟ್ಟಿಕೊಂಡಿದೆ. ಮನೆಯಿಂದ ದೂರವಿದೆ ಎನ್ನುವ ಕಾರಣಕ್ಕೋ, ಸಮಯದ ಅಭಾವದಿಂದಲೋ, ಗ್ರಂಥಾಲಯಕ್ಕೆ ತೆರಳಿ ಓದಲು ಸಾಧ್ಯವಾಗದವರಿಗೆ ಸಂಚಾರಿ ಗ್ರಂಥಾಲಯ ಸಹಕಾರಿಯಾಗಿದೆ.   

5. ಮಕ್ಕಳ ಗ್ರಂಥಾಲಯ

ಹೆಸರೇ ಸೂಚಿಸುವಂತೆ ಮಕ್ಕಳಿಗೆ ಸಂಬಂಧಪಟ್ಟ ಪುಸ್ತಕಗಳ ಸಂಗ್ರಹವಿರುವ ಗ್ರಂಥಾಲಯಗಳೇ ಮಕ್ಕಳ ಗ್ರಂಥಾಲಯ ಆಗಿವೆ. ಇಲ್ಲಿ 18 ವರ್ಷದೊಳಗಿನ ಮಕ್ಕಳ ಓದಿಗೆ ಬೇಕಾದ ಪುಸ್ತಕಗಳ ಸಂಗ್ರಹವಿರುತ್ತದೆ.

ಆಟ-ಪಾಠ, ಮಕ್ಕಳ ಬೌದ್ಧಿಕ ಬೆಳವಣಿಗೆ, ಮಕ್ಕಳ ಆರೋಗ್ಯ, ಮಕ್ಕಳ ಕಥೆಗಳು, ಚಿತ್ರ ಬಿಡಿಸುವ ವಿಧಾನ ಹೀಗೆ ಮಕ್ಕಳಿಗೆ ಅನುಕೂಲಕರ ಹಾಗೂ ಆಸಕ್ತಿ ಹೆಚ್ಚಿಸುವ ಪುಸ್ತಕಗಳನ್ನು ಇಲ್ಲಿ ಕಾಣುತ್ತೇವೆ. 

6. ಆಧುನಿಕ ಗ್ರಂಥಾಲಯ

ಆಧುನಿಕ ಗ್ರಂಥಾಲಯ ಹೆಚ್ಚಾಗಿ ಯುತ್ಸ್ ಹಾಗೂ ಮಧ್ಯ ವಯಸ್ಕರನ್ನು ಆಧರಿಸಿ ನಿರ್ಮಾಣ ಮಾಡಲಾಗಿದೆ. ಆಧುನಿಕ ಗ್ರಂಥಾಲಯಗಳು ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಡಿಜಿಟಲ್ ಗ್ರಂಥಾಲಯದ ಮಾಹಿತಿಯನ್ನು ಒಳಗೊಂಡಿದೆ.

ಸರ್ಕಾರಿ ಸೇವೆಗಳ ಮಾಹಿತಿ, ಸರ್ಕಾರಿ ನೌಕರಿ ಪರೀಕ್ಷೆ ಬರೆಯಲು ಬೇಕಾದ ಎಲ್ಲಾ ಮಾಹಿತಿ ಆಧುನಿಕ ಗ್ರಂಥಾಲಯದಲ್ಲಿ ಸಿಗುತ್ತದೆ. ಪ್ರಶ್ನೋತ್ತರ, ವಿವಿಧ ಪರೀಕ್ಷೆಗೆ ಸಂಬಂಧಪಟ್ಟ ಪುಸ್ತಕಗಳು, ಮ್ಯಾಗಜಿನ್ ಗಳು ಲಭ್ಯ ಇವೆ.

ಇನ್ನು ಕುಳಿತಲ್ಲಿಯೇ ಗೂಗಲ್ ಸರ್ಚ್ ಮುಖಾಂತರ ಮಾಹಿತಿ ತೆಗೆದುಕೊಳ್ಳುವುದು, ಸಾಮಾಜಿಕ ಜಾಲತಾಣಗಳ ಮೂಲಕ ಲೇಖನ, ಪೇಪರ್ ಓದುವುದು, ಆ್ಯಪ್ ಗಳ ಮೂಲಕ ಸಾಹಿತ್ಯದ ಅಪಾರ ಸಂಪತ್ತಿನ ಬಗ್ಗೆ ತಿಳಿದುಕೊಳ್ಳುವುದನ್ನು ಡಿಜಿಟಲ್ ಗ್ರಂಥಾಲಯ ಎಂದು ಹೆಸರಿಸಲಾಗಿದೆ. 

ಆರು ಬಗೆಯ ಗ್ರಂಥಾಲಯದ ನಂತರ ಈಗ ನಾವು ಗ್ರಂಥಾಲಯದ ಭಾಗಗಳ ಬಗ್ಗೆ ತಿಳಿಯೋಣ. ಗ್ರಂಥಾಲಯವನ್ನು ಎರಡು ಭಾಗಗಳನ್ನಾಗಿ ವಿಂಗಡಿಸಲಾಗಿದೆ. 


ಗ್ರಂಥಾಲಯದ ಎರಡು ಭಾಗಗಳು 

1. ಪುಸ್ತಕ ಓದುವುದು

ಗ್ರಂಥಾಲಯವನ್ನು ನಾವು ಎರಡು ಭಾಗಗಳಲ್ಲಿ ವಿಂಗಡಿಸಿದ್ದನ್ನು ಕಾಣಬಹದು. ಅದರಲ್ಲಿ ಒಂದನೇ ಭಾಗ ಪುಸ್ತಕ ಓದುವುದು ಆಗಿದೆ. ಯಾರೇ ಗ್ರಂಥಾಲಯಕ್ಕೆ ಹೋದರೂ ಸಹ ಅಲ್ಲಿಯೇ ಕುಳಿತು ಪುಸ್ತಕ ಓದುತ್ತಾರೆ. ಇಲ್ಲವೇ ಗ್ರಂಥಾಲಯದ ಕಾರ್ಡ್ ಮಾಡಿಸಿ ಪುಸ್ತಕವನ್ನು ಮನೆಗೆ ತೆಗೆದುಕೊಂಡು ಬಂದು ಓದಿ ಮತ್ತೆ ಮರಳಿಸುತ್ತಾರೆ. ಈ ಪ್ರಕ್ರಿಯೆ ಗ್ರಂಥಾಲಯದ ಪ್ರಮುಖ ಭಾಗವಾಗಿದೆ.

ಪುಸ್ತಕವನ್ನು ನೀಡಲೆಂದೇ ಗ್ರಂಥಾಲಯದಲ್ಲಿ ನಿರ್ವಾಹಕರು ಇರುತ್ತಾರೆ. ಅವರೇ ಸಾರ್ವಜನಿಕರ ಎಂಟ್ರಿ ಮಾಡಿ, ಸಮಯ ಹಾಗೂ ಸಹಿ ನಮೂದಿಸಿದ ನಂತರ ಪುಸ್ತಕ ತೆಗೆದುಕೊಂಡು. ಅಲ್ಲಿಯೇ ಕುಳಿತು ಓದಲು ಅನುಮತಿ ನೀಡುತ್ತಾರೆ. ಇಲ್ಲವೇ ಕಾರ್ಡ್ ಹೊಂದಿದವರಿಗೆ ಪಸ್ತಕಗಳನ್ನುಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡುತ್ತಾರೆ. ಪುಸ್ತಕ ಆಯ್ಕೆಯಾದ ನಂತರ ಪುಸ್ತಕದ ಹೆಸರು ಮತ್ತು ಸಂಖ್ಯೆಯನ್ನು ನಮೂದಿಸಿ, ಪುಸ್ತಕ ನೀಡುತ್ತಾರೆ.  

2. ಪುಸ್ತಕ ಬಿಡುಗಡೆ ಮಾಡುವುದು

ಗ್ರಂಥಾಲಯದಲ್ಲಿ ಕೇವಲ ಪುಸ್ತಕ ಕೊಡುವುದು, ತೆಗೆದುಕೊಳ್ಳುವುದು, ಓದುವ ಪ್ರಕ್ರಿಯೆ ಮಾತ್ರ ನಡೆಯುವುದಿಲ್ಲ. ಇಲ್ಲಿ ಸಾಹಿತಿಗಳು, ಲೇಖಕರು, ಸರ್ಕಾರದಿಂದ ಲೋಕಾರ್ಪಣೆಗೊಳ್ಳುವ ಪುಸ್ತಕಗಳನ್ನು ಗ್ರಂಥಾಲಯಗಳಲ್ಲಿ ಸುಂದರ ಕಾರ್ಯಕ್ರಮ ನಡೆಸುವ ಮೂಲಕ ಪುಸ್ತಕ ಬಿಡುಗಡೆ ಮಾಡುವ ಕಾರ್ಯಕ್ರಮವಾಗಿದೆ.

ಪುಸ್ತಕಗಳ ಹಂಚಿಕೆ, ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಗ್ರಂಥಾಲಯದ ಎರಡನೇ ಭಾಗವಾಗಿದೆ. 

ಗ್ರಂಥಾಲಯದ ಮಹತ್ವ granthalaya mahatva prabandha in annada

ಒಂದು ಮಂದಿರ ಕಟ್ಟಿಸಿದರೆ ಸಾವಿರಾರು ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ. ಒಂದು ಗ್ರಂಥಾಲಯ ಕಟ್ಟಿಸಿದರೆ ಸಾವಿರಾರು ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ “ ಎಂದು ಡಾ. ಬಿ.ಆರ್.ಅಂಬೇಡ್ಕರ್ ಹೇಳಿದ್ದಾರೆ. ಅವರ ಈ ಒಂದು ನಾಣ್ನುಡಿಯೇ ಗ್ರಂಥಾಲಯದ ಮಹತ್ವ ಎಂಥದ್ದು ಎಂಬುದನ್ನು ಸಾರಿ ಸಾರಿ ಹೇಳುತ್ತದೆ. ಗ್ರಂಥಾಲಯ ಒಂದು ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ದಾರಿದೀಪವಾಗಿದೆ.

ಗ್ರಂಥಾಲಯದ ಅನುಕೂಲಗಳು ಈ ಕೆಳಗಿನಂತಿವೆ: 

 • ಗ್ರಂಥಾಲಯದಿಂದ ಶಿಕ್ಷಣದ ಗುಣಮಟ್ಟ ಹೆಚ್ಚುತ್ತದೆ. 
 • ಗ್ರಂಥಾಲಯದಿಂದ ಜನರು ಜ್ಞಾನಾರ್ಜನೆ ಪಡೆಯುತ್ತಾರೆ. ಹಲವು ವಿಷಯಗಳ ಜ್ಞಾನ ಹೊಂದುತ್ತಾರೆ. 
 •  ಪೀಳಿಗೆಯಿಂದ ಪೀಳಿಗೆಗೆ ನಮ್ಮ ಸಂಸ್ಕೃತಿ, ಸಾಹಿತ್ಯ, ಕಲೆ, ವಿಜ್ಞಾನ, ಪರಂಪರೆ, ಭಾಷೆಗಳ ಜ್ಞಾನವನ್ನು ಒದಗಿಸುತ್ತದೆ. 
 • ವಾರಪತ್ರಿಕೆ, ಮಾಸ ಪತ್ರಿಕೆ, ದಿನಪತ್ರಿಕೆ, ಮ್ಯಾಗಜಿನ್ ಗಳು ಓದುಗರಿಗೆ ದೈನಂದಿನ ಆಗು-ಹೋಗುಗಳು ಮತ್ತು ಲೇಖನಗಳನ್ನು ಓದಲು ಅವಕಾಶ ಮಾಡಿ ಕೊಡುತ್ತದೆ. 
 • “ ಒಂದು ಒಳ್ಳೆಯ ಪುಸ್ತಕ ನೂರು ಸ್ನೇಹಿತರಿಗೆ ಸಮ, ಆದರೆ ಒಬ್ಬ ಒಳ್ಳೆಯ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮ” ಎಂಬ ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ ಅವರ ವಾಣಿಯಂತೆ ಗ್ರಂಥಾಲಯ ಮನಸ್ಸಿನ ವಿಕಾಸ ಹಾಗೂ ಅರಿವು, ತಿಳಿವಳಿಕೆ ನೀಡುತ್ತದೆ.  
 • ಗ್ರಂಥಾಲಯದಲ್ಲಿ ಪುಸ್ತಕಗಳನ್ನು ತೆಗೆದುಕೊಂಡು ಓದುವ ಹವ್ಯಾಸ ನಮ್ಮ ಜೀವನದಲ್ಲಿ ನಾವು ಯಾವ ರೀತಿ ಇರಬೇಕು, ಹೇಗೆಂದರೆ ಹಾಗೆ ಪುಸ್ತಕಗಳನ್ನು ಮಡಚುವುದು, ಪುಸ್ತಕದ ಮೇಲೆ ಬರೆಯವುದು, ಹಾಳೆಗಳನ್ನು ಕೀಳುವುದು ಇಂತಹ ರೂಢಿಯನ್ನು ತಪ್ಪಿಸುತ್ತದೆ. ಸಮಯಪ್ರಜ್ಞೆ ಮೂಡಿಸುತ್ತದೆ. ಸರಿಯಾದ ಸಮಯಕ್ಕೆ ಪುಸ್ತಕ ವಾಪಸ್ ಕೊಡುವುದು ಇದೆಲ್ಲವೂ ನಮ್ಮ ಜೀವನದಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತದೆ. 
 • ಬಿಡುವಿನ ವೇಳೆಯನ್ನು ಸದುಪಯೋಗ ಪಡಿಸಿಕೊಳ್ಳಲು ಮತ್ತು ಇಷ್ಟದ ಲೇಖಕರ ಪುಸ್ತಕಗಳನ್ನು ಓದಲು ಇದು ಸಹಕಾರಿ. 
 • ಕಥೆ, ಕಾದಂಬರಿ, ಕವನ, ಐತಿಹಾಸಿಕ ಘಟನೆಗಳಂತ ಸ್ವಾರಸ್ಯಕರ ಬರಹಗಳ ಸಂಗ್ರಹವನ್ನು ಗ್ರಂಥಾಲಯ ಹೊಂದಿದ್ದು, ಜನರಲ್ಲಿ ಪುಸ್ತಕದ ಸದಭಿರುಚಿ ಹೆಚ್ಚಿಸಲು ಸಹಕಾರಿಯಾಗಿದೆ. 
 • ನಾಟಕ ಮತ್ತು ಇತರೆ ಕೃತಿಗಳ ಸಂಗ್ರಹ ಓದುಗನಿಗೆ ಮನರಂಜನೆ ನೀಡುತ್ತದೆ. 

ಗ್ರಂಥಾಲಯ ದಿನಾಚರಣೆ

ಗ್ರಂಥಾಲಯ ಪಿತಾಮಹ ಎಸ್.ಆರ್.ರಂಗನಾಥನ್ ಅವರ ಸವಿ ನೆನಪಿಗಾಗಿ ಆಗಸ್ಟ್ 12ನ್ನು ಗ್ರಂಥಾಲಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಸ್ವಾತಂತ್ರ್ಯಾ ನಂತರದಲ್ಲಿ ಶಿಕ್ಷಣ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತಾ ಹೋಯಿತು. 

ಪ್ರಬಂಧ ಬರೆಯುವುದು ಹೇಗೆ? Click Here
ದೂರದರ್ಶನ ಪ್ರಬಂಧ Click Here
ಕೃತಕ ಬುದ್ಧಿಮತ್ತೆ ಪ್ರಬಂಧ Click Here
ಕ್ರೀಡೆ ಪ್ರಬಂಧ Click Here

ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ

ಗ್ರಂಥಾಲಯ ಪರಿಕಲ್ಪನೆ ವಿಸ್ತಾರಗೊಳ್ಳುತ್ತಾ ಹೋಯಿತು. ಗ್ರಂಥಾಲಯ ವಿಭಾಗದಲ್ಲಿ ಕೆಲಸ ಮಾಡುವವರಿಗೆಂದೇ ವ ವಿಶ್ವವಿದ್ಯಾಲಯಗಳಲ್ಲಿ ಕೋರ್ಸ್ ಗಳು ಆರಂಭವಾದವು. ಅದರಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕೂಡ ಒಂದಾಗಿದೆ.

ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಪರಷ್ಪರ ಹೊಂದಿಕೊಂಡಿವೆ. ಈಗ ಡಿಜಿಟಲ್ ಲೈಬ್ರರಿಗಳ ಬಳಕೆ ಹೆಚ್ಚಿದೆ. ಅದರಲ್ಲೂ ಮಾಹಿತಿ ಒದಗಿಸುವ ಕೆಲಸ ವೇಗವಾಗಿ ಬೆಳೆಯುತ್ತಿದೆ. ಹೀಗಾಗಿ  ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ ತುಂಬಾ ಬೇಡಿಕೆಯ ವಿಷಯವಾಗಿದೆ. ಅದಾಗ್ಯೂ ಮಾಹಿತಿ ತಂತ್ರಜ್ಞಾನ ಉದ್ಯೋಗಕ್ಕೆ ಪೂರಕವಾಗಿರುವ ಮಾಹಿತಿ ನೀಡುತ್ತದೆ. 

ವೃತ್ತಿಪರ ಕ್ಷೇತ್ರದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರ ಆಧುನಿಕ ಜಗತ್ತಿನಲ್ಲಿ ಹೆಚ್ಚು ಬೇಡಿಕೆಯಲ್ಲಿದೆ ಮತ್ತು ಬೇರೆ ಕ್ಷೇತ್ರಗಳಿಗಿಂತ ಮುಂಚೂಣಿಯಲ್ಲಿದೆ. ಮಾಹಿತಿ ವಿನಿಮಯ ಕೇಂದ್ರವಾಗಿ ಬೆಳೆದಿರುವ ಗ್ರಂಥಾಲಯದ ಮೂಲ ಸ್ವರೂಪ ಸಾಕಷ್ಟು ಬದಲಾವಣೆಯಾಗಿದೆ.

ಮೊದಲಿದ್ದ ಗ್ರಂಥಪಾಲಕರು ಎನ್ನುವ ಹುದ್ದೆ ಈಗ ಬದಲಾಗಿದ್ದು, ಮಾಹಿತಿ ವಿಜ್ಞಾನಿ ಎಂಬ ಹೆಸರಿನೊಂದಿಗೆ ಹುದ್ದೆ ಬದಲಾಗಿದೆ. ಶಿಕ್ಷಣ, ಸಂಶೋಧನೆ, ಭಾಷೆ, ಸಾಹಿತ್ಯ, ಸಾಮಾಜಿಕ ವಿಜ್ಞಾನ ಕ್ಷೇತ್ರ, ವಿಜ್ಞಾನ ಮತ್ತು ತಂತ್ರಜ್ಞಾನ, ಕಾನೂನು, ವೈದ್ಯಕೀಯ, ಜಾನಪದ ಸೇರಿದಂತೆ ಸಾಕಷ್ಟು ವಿಷಯಗಳ ಮಾಹಿತಿ ಹೊಂದಿವೆ ಗ್ರಂಥಾಲಯಗಳು.

ಹೀಗಾಗಿ ಮಾಹಿತಿ ಮತ್ತು ತಂತ್ರಜ್ಞಾನ ಚಾಲ್ತಿಗೆ ಬಂದಿತು. ಈಗ ಸಾಕಷ್ಟು ಬೇಡಿಕೆಯ ವೃತ್ತಿಪರ ಕೋರ್ಸ್ ಆಗಿ ಮಾಹಿತಿ ತಂತ್ರಜ್ಞಾನ ಹೊರಹೊಮ್ಮಿದೆ. 

ಪುಸ್ತಕಗಳ ಮಹತ್ವ 

ಪುಸ್ತಕವನ್ನು ತೆರೆದಾಗ ಹೊಸ ಪ್ರಪಂಚವೇ ತೆರೆದುಕೊಳ್ಳುತ್ತದೆ ಎಂಬ ಮಾತಿದೆ. ಪುಸ್ತಕ ನಮ್ಮಲ್ಲಿನ ಅಂಧಕಾರ, ತಮಸ್ಸು ಭಾವನೆಗಳನ್ನು ತೆಗೆದು ಹಾಕಿ ಒಳ್ಳೆತನವನ್ನು ಮೈಗೂಡಿಸಿಕೊಳ್ಳುವಂತೆ ಮಾಡುತ್ತದೆ. ಮೌಲ್ಯಗಳ ಕಲಿಕೆ, ವ್ಯಕ್ತಿಯ ಸರ್ವತೋಮುಖ ಬೆಳವಣಿಗೆ, ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದೆ. 

 • ಪುಸ್ತಕವನ್ನು ಗೆಳೆಯನನ್ನಾಗಿ ಮಾಡಿಕೊಂಡರೆ ವೈಚಾರಿಕ ವಿಚಾರಗಳು, ಪ್ರಬುದ್ಧತೆ ವ್ಯಕ್ತಿಯಲ್ಲಿ ಬೆಳೆಯುತ್ತದೆ. ಇದು ಒಳ್ಳೆಯ ಆಲೋಚನೆ, ಉತ್ತಮ ಕಾರ್ಯಗಳತ್ತ ನಮ್ಮನ್ನು ಪ್ರಚೋದಿಸುತ್ತದೆ. 
 • ಪುಸ್ತಕ ಓದುವುದರಿಂದ ಎಲ್ಲಾ ಕ್ಷೇತ್ರಗಳ ಬಗ್ಗೆ ಜ್ಞಾನ ದೊರೆಯುತ್ತದೆ. ಸೌಹಾರ್ದ ಮನೋಭಾವ ಬೆಳೆಯುತ್ತದೆ. 
 • ವಿದ್ಯಾರ್ಥಿಗಳಿಗೆ ಪುಸ್ತಕ ಓದುವ ಹವ್ಯಾಸ ಜೀವನ ಮೌಲ್ಯ ಮತ್ತು ಜೀವನ ಪಾಠ ಕಲಿಸುತ್ತದೆ. 
 • ಪುಸ್ತಕದಿಂದ ಪ್ರಾಪಂಚಿಕ ಜ್ಞಾನ ಸಿಗುತ್ತದೆ. ಪುಸ್ತಕ ವ್ಯಕ್ತಿಯ ಬದುಕನ್ನು ರೂಪಿಸಬಲ್ಲ ಶಕ್ತಿ ಹೊಂದಿದೆ. ಒಂದೊಳ್ಳೆ ಪುಸ್ತಕ ವ್ಯಕ್ತಿಯ ಜೀವನಕ್ಕೆ ದಾರಿದೀಪವಾಗಬಲ್ಲದು.             

ವಿದ್ಯಾರ್ಥಿ ಜೀವನದಲ್ಲಿ ಪುಸ್ತಕದ ಮಹತ್ವ ಪ್ರಬಂಧ

‘ಸ್ಟುಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್’ ಎಂಬ ಮಾತಿದೆ. ನಮ್ಮ ಜೀವನವನ್ನು ಬಂಗಾರದಂತೆ ಮೌಲ್ಯವಾಗಿಸಿಕೊಳ್ಳಲು ಸಹಾಯ ಮಾಡುವುದೇ ಪುಸ್ತಕಗಳು. ಪುಸ್ತಕಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡಿಪಾಯ ಹಾಕುತ್ತವೆ.

ಓದಿನಿಂದ ವಿದ್ಯಾರ್ಥಿ ಅಪಾರ ಜ್ಞಾನ ಪಡೆಯುತ್ತಾ ಪ್ರಬುದ್ಧನಾಗುತ್ತಾನೆ. ಹಾಗಾದರೆ ವಿದ್ಯಾರ್ಥಿಗಳ ಜೀವನದಲ್ಲಿ ಪುಸ್ತಕಗಳ ಪಾತ್ರ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ನೋಡೋಣ. 

 1. ವಿದ್ಯಾರ್ಥಿ ಪುಸ್ತಕಗಳ ಓದಿನಿಂದ ಚಿಕ್ಕ ವಯಸ್ಸಿನಲ್ಲೇ ಅಪಾರ ಜ್ಞಾನ ಸಂಪತ್ತು ಪಡೆಯುತ್ತಾನೆ. 
 2. ವಿದ್ಯಾರ್ಥಿಗಳು ಓದುವ ಹವ್ಯಾಸ ಅವರ ಭವಿಷ್ಯವನ್ನು ಸುಗಮವಾಗಿಸುತ್ತದೆ. ಹೆಚ್ಚಿನ ವ್ಯಾಸಂಗದ ಸಮಯದಲ್ಲಿ ಬೋರ್ ಆಗದೆ, ವಿಷಯ ವಸ್ತುವನ್ನು ಬೇಗ ಅರಿತುಕೊಳ್ಳುತ್ತಾನೆ. 
 3. ಪುಸ್ತಕಗಳ ಓದು ವಿದ್ಯಾರ್ಥಿಯಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ವಿವಿಧ ವಿಷಯಗಳ ಬಗ್ಗೆ ತಿಳಿವಳಿಕೆ ಹೊಂದಲು ಸಹಾಯ ಮಾಡುತ್ತದೆ. 
 4. ವಸ್ತುಗಳನ್ನು ಕಂಡಾಗ ಅವುಗಳ ಬಗ್ಗೆ ತಿಳಿಯುವ ಕುತೂಹಲ, ಓದಿನೆಡೆಗೆ ಆಸಕ್ತಿ ಹೆಚ್ಚುತ್ತದೆ. 
 5. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ವಿಷಯಗಳ ಗ್ರಹಣೆಗೆ ಮತ್ತು ಹೊಸ ಹೊಸ ಅರ್ಥಗಳನ್ನು ತಿಳಿಯಲು ಸಹಕಾರಿಯಾಗಿದೆ. 
 6. ವಿದ್ಯಾರ್ಥಿಗಳ ಜೀವನದಲ್ಲಿ ಪುಸ್ತಕ ಓದು, ವಿವೇಕ, ವಿನಯ, ಸಂಸ್ಕಾರ ಕಲಿಯಲು ಮತ್ತು ಉತ್ತಮ ಸ್ನೇಹಿತರನ್ನು ಹೊಂದಲು ಸಹಾಯ ಮಾಡುತ್ತದೆ. ಕೆಟ್ಟವರ ಸಂಗ ಮಾಡಿ ದಾರಿ ತಪ್ಪುವುದನ್ನು ತಪ್ಪಿಸುತ್ತದೆ. 
 7. ಬರವಣಿಗೆ, ತಾರ್ಕಿಕ ವಿಚಾರ, ಉತ್ತಮ ಆಲೋಚನೆಗಳ ಬೆಳವಣಿಗೆಗೆ ಸಹಕಾರಿ.
 8. ಮೌಲ್ಯಗಳ ಕಲಿಕೆಗೆ ಮತ್ತು ಯಾವುದೇ ವಿಷಯದ ಬಗ್ಗೆ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳುವುದು ಮತ್ತು ಸದೃಢ ಮನಸ್ಸು ಹೊಂದಲು ಪುಸ್ತಕ ಸಹಕಾರಿಯಾಗಿದೆ. 
 9. ಜೀವನದಲ್ಲಿ ಎದುರಾಗುವ ಸವಾಲುಗಳು, ಸಂಕಷ್ಟಗಳನ್ನು ಸಮಾಧಾನದಿಂದ ಎದುರಿಸುವುದನ್ನು ಪುಸ್ತಕಗಳ ಓದು ಕಲಿಸುತ್ತದೆ. 
 10. ಕೆಟ್ಟ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳದೇ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ಇಚ್ಛೆ, ಚಿಕ್ಕಂದಿನಿಂದಲೇ ಹೊರ ಹೊಮ್ಮುವಂತೆ ಮಾಡುತ್ತವೆ. 

ವಿಶ್ವವಿದ್ಯಾನಿಲಯದ ಗ್ರಂಥಾಲಯಗಳು Library Essay In Kannada

ಉನ್ನತ ಶಿಕ್ಷಣಕ್ಕೆ ನಾವು ಹೋದಾಗ ಅಲ್ಲಿ ವಿಶ್ವವಿದ್ಯಾಲಯಗಳು ಬೃಹತ್ ಗ್ರಂಥಾಲಯ ಹೊಂದಿರುವುದನ್ನು ಕಾಣುತ್ತೇವೆ. ಅಲ್ಲಿ ನಮಗೆ ವಿವಿಧ ಭಾಷೆ, ಸಾಹಿತ್ಯ, ಕ್ಷೇತ್ರಗಳ ಅಧ್ಯಯನಕ್ಕೆ ಅನುಕೂಲವಾಗುವ ಮತ್ತು ಪಠ್ಯ ಹಾಗೂ ಪಠ್ಯೇತರ ಪುಸ್ತಕಗಳು ಓದಲು ಸಿಗುತ್ತವೆ.

ವಿದ್ಯಾರ್ಥಿ ಅದೇ ವಿಶ್ವವಿದ್ಯಾಲಯದವನಾಗಿದ್ದಾಗ ಮಾತ್ರ ವಿಶ್ವವಿದ್ಯಾಲಯ ಗ್ರಂಥಾಲಯದ ಸೌಲಭ್ಯ ಪಡೆಯಲು ಸಾಧ್ಯ. ಇಲ್ಲಿ ಸರ್ಕಾರಿ ಅನುದಾನದ ಮೂಲಕ ಹಾಗೂ ಯುಜಿಸಿ ಅನುದಾನದ ಮೂಲಕ ಬಂದ ಪುಸ್ತಕಗಳ ಸಂಗ್ರಹ ಇರುತ್ತದೆ.

ಹಲವಾರು ಪುಸ್ತಕಗಳು, ಜರ್ನಲ್ ಗಳು, ರಿಪೋರ್ಟ್ಸ್, ಥೀಸಿಸ್ ಸೇರಿದಂತೆ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮಗಳು ನಡೆಯುತ್ತವೆ. 

ಭವಿಷ್ಯದ ಗ್ರಂಥಾಲಯಗಳು

‘ಪ್ರಪಂಚದಲ್ಲಿ ಮರಣವಿಲ್ಲದ ವರ ಪಡೆದಿರುವ ವಸ್ತು- ಪುಸ್ತಕ’. ಕಾಲ ಬದಲಾದಂತೆ ಹಾಗೂ ತಂತ್ರಜ್ಞಾನ ಮುಂದುವರೆದಂತೆ ಗ್ರಂಥಾಲಯದ ಸ್ವರೂಪ, ಚಿತ್ರಣ ಕೂಡ ಬದಲಾಗಿದೆ. ಈಗ ಎಲ್ಲೆಲ್ಲೂ ಡಿಜಿಟಲ್ ರಂಗ ಹೆಚ್ಚು ವಿಸ್ತರಿಸುತ್ತ ಬೆಳೆದಿದೆ.

ಹೀಗಾಗಿ ಭವಿಷ್ಯದ ಗ್ರಂಥಾಲಯಗಳಾಗಿ ಈಗ ಡಿಜಿಟಲ್ ಲೈಬ್ರರಿ, ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಪುಸ್ತಕಗಳನ್ನು ನಾವಿದ್ದಲ್ಲಿಯೇ ಓದುವ ಅವಕಾಶವಿದೆ.

ನಮಗೆ ಬೇಕಾದ ಪುಸ್ತಕಗಳನ್ನು ಮೊಬೈಲ್, ಲ್ಯಾಪ್ ಟಾಪ್, ಕಂಪ್ಯೂಟರ್ ಪರದೆಯ ಮೂಲಕ ಇಂಟರ್ನೆಟ್, ಗೂಗಲ್ ಸರ್ಚ್ ಮುಖಾಂತರ ಓದುವ, ಮಾಹಿತಿ ಪಡೆದುಕೊಳ್ಳುವ ಪ್ರಕ್ರಿಯೆ ಹೆಚ್ಚು ನಡೆಯುತ್ತಿದೆ.

ಈಗಿನ ಸಾಕಷ್ಟು ಜನರು ಭವಿಷ್ಯದ ಗ್ರಂಥಾಲಯವಾಗಿರುವ ಡಿಜಿಟಲ್ ಲೈಬ್ರರಿಯನ್ನೇ ಆಶ್ರಯಿಸಿದ್ದಾರೆ. 

ಗ್ರಂಥಾಲಯದ ಅನುಕೂಲಗಳು

ಗ್ರಂಥಾಲಯದಿಂದ ಸಾಕಷ್ಟು ಅನುಕೂಲತೆಗಳು ಇವೆ. ಅವುಗಳಲ್ಲಿ ಕೆಲವು ಇಲ್ಲಿವೆ. 

 • ಎಲ್ಲರಿಗೂ ಸಮಾನವಾಗಿ ಪುಸ್ತಕಗಳು ಓದಲು ಸಿಗುವ ಅವಕಾಶದ ಸೃಷ್ಟಿ. 
 • ಹೆಚ್ಚು ದುಡ್ಡು ಖರ್ಚು ಮಾಡಿ ಪುಸ್ತಕ ಕೊಳ್ಳಲಾಗದವರಿಗೆ ಗ್ರಂಥಾಲಯ ಪುಸ್ತಕ ಓದಿಗೆ ಸಹಕಾರಿಯಾಗಿದೆ. 
 • ಗ್ರಂಥಾಲಯ ನಮ್ಮಲ್ಲಿನ ಅಶಿಸ್ತನ್ನು ತೆಗೆದು ಹಾಕುತ್ತದೆ. 
 • ಗ್ರಂಥಾಲಯ ಸಮಯದ ಬಗ್ಗೆ ಜ್ಞಾನ ಹೊಂದುವಂತೆ ಮಾಡುತ್ತದೆ. 
 • ಗ್ರಂಥಾಲಯ ಭವಿಷ್ಯ ರೂಪಿಸುವ ದೇವಾಲಯವಾಗಿದೆ. 
 • ಗ್ರಂಥಾಲಯ ಓದಿನ ಹಾಗೂ ಪುಸ್ತಕ ಸಂಸ್ಕೃತಿಯನ್ನು ಜೀವಂತವಾಗಿರಿಸಲು ಸಹಕಾರಿಯಾಗಿದೆ. 

ಉಪಸಂಹಾರ: 

ಒಟ್ಟಿನಲ್ಲಿ ಗ್ರಂಥಾಲಯಗಳು ಆರಂಭವಾದಾಗಿನಿಂದ ಮನುಷ್ಯ ಮತ್ತಷ್ಟು ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡುತ್ತ ಹೋದ. ಗ್ರಂಥಾಲಯ ವ್ಯಕ್ತಿಯಲ್ಲಿ ಓದುವ ಹಾಗೂ ಸಾಧಿಸುವ ಛಲವನ್ನು ಹುಟ್ಟು ಹಾಕುತ್ತದೆ.

ಓದಿನ ಹಸಿವು ವ್ಯಕ್ತಿಯನ್ನು ಯಾವ ಸಾಧನೆಗಾದರೂ ಸಿದ್ಧಗೊಳ್ಳುವಂತೆ ಮಾಡುತ್ತದೆ. ಜ್ಞಾನ ವ್ಯಕ್ತಿಯ ಮೊದಲ ಸಂಪತ್ತಾಗಬೇಕು. ಅಂದಾಗ ಮಾತ್ರ ಆತ ಉತ್ತಮ ಬದುಕು ಹೊಂದಲು ಸಾಧ್ಯ.

ಜಗತ್ತಿನಲ್ಲಿ ಯಾರು ಏನನ್ನು ಬೇಕಾದರೂ ಕದಿಯಬಹುದು. ಆದರೆ ಯಾರೂ ಕದಿಯಲಾಗದ ಸಂಪತ್ತು ಎಂದರೆ ಅದು ಜ್ಞಾನ ಮಾತ್ರ. “ಮಹಾಜ್ಞಾನಿಯಾದವನು ಎಲ್ಲರಿಂದಲೂ ಗೌರವಿಸಲ್ಪಡುತ್ತಾನೆ” ಎಂಬ ಮಾತಿದೆ.

ಇದು ಅಕ್ಷರಶಃ ನಿಜ. ಯಾರಲ್ಲಿ ಜ್ಞಾನ ಭಂಡಾರ ತುಂಬಿದೆಯೋ ಅವರು ಯಾರಿಗೂ ಅಂಜುವ ಪ್ರಮೇಯವೇ ಬರುವುದಿಲ್ಲ. ಎಲ್ಲ ವಿಷಯದ ಜ್ಞಾನ ಸಂಪಾದನೆ ವ್ಯಕ್ತಿಯನ್ನು ಮಹಾಜ್ಞಾನಿಯನ್ನಾಗಿ ಮಾಡುತ್ತದೆ. ಆಗ ಇಡೀ ಜಗತ್ತೇ ಆತನನ್ನು ಗೌರವಿಸುತ್ತದೆ. ಆತನಿಂದ ಸಲಹೆ, ಮಾರ್ಗದರ್ಶನ ಪಡೆದುಕೊಳ್ಳುತ್ತದೆ.

FAQ on Essay On Library In Kannada


ವಿಶ್ವದ ಅತಿ ದೊಡ್ಡ ಗ್ರಂಥಾಲಯ ಯಾವುದು?

‘ಗ್ರಂಥವಿಲ್ಲದ ಕೋಣೆ ಆತ್ಮವಿಲ್ಲದ ದೇಹವಿದ್ದಂತೆ.’  ಮೊಟ್ಟ ಮೊದಲ ಬಾರಿಗೆ ಗ್ರಂಥಾಲಯ 1800 ಇಸವಿಯಲ್ಲಿ ಆರಂಭವಾಯಿತು.

ಲಂಡನ್ ನಲ್ಲಿರುವ ಕಾಂಗ್ರೆಸ್ ಲೈಬ್ರರಿ’ ದೊಡ್ಡ ಲೈಬ್ರರಿ ಆಗಿದೆ ಮತ್ತು ಯುನೈಟೆಡ್ ಸ್ಟೇಟ್ಸ್ ನ ‘ನ್ಯಾಷನಲ್ ಲೈಬ್ರರಿ’ ವಿಶ್ವದ ಅತಿದೊಡ್ಡ ಗ್ರಂಥಾಲಯದ ಸಾಲಿನಲ್ಲಿ ಬರುತ್ತದೆ.

ಗ್ರಂಥಾಲಯ ದಿನಾಚರಣೆ ಯಾವಾಗ ಆಚರಿಸಲಾಗುತ್ತದೆ?

Essay On Library In Kannada Language

ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆ ನೀಡಿದಕ್ಕಾಗಿ ಎಸ್.ಆರ್. ರಂಗನಾಥನ್ ರವರ ಜನ್ಮದಿನವನ್ನು ಪ್ರತಿ ವರ್ಷ ಆಗಸ್ಟ್ 12 ರಂದು ಭಾರತದಲ್ಲಿ ರಾಷ್ಟ್ರೀಯ ಗ್ರಂಥಾಲಯ ದಿನವನ್ನು ಆಚರಿಸಲಾಗುತ್ತದೆ.

ನಿಮಗೆ ಈ Essay On Library In Kannada ಸಹಾಯಕವಾಗಿದೆ ಎಂದು ಭಾವಿಸುತ್ತೇವೆ. ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರೊಂದಿಗೆ Share ಮಾಡಿ ಅಥವಾ ಕೆಳಗಡೆ Comment ಮಾಡಿ.

Leave a Comment

error: Content is protected !!