ಪ್ರಿಯ ಓದುಗರೇ, ನಾವಿಂದು ಈ ಲೇಖನದಲ್ಲಿ ಜೀವಕೋಶ ಎಂದರೇನು?, ಜೀವಕೋಶದ ರಚನೆ ಮತ್ತು ಕಾರ್ಯ, ಜೀವಕೋಶದ ಆವಿಷ್ಕಾರ, ಜೀವಕೋಶದ ಭಾಗಗಳು ಹೀಗೆ ಹಲವಾರು ಪ್ರಶ್ನೆಗಳನ್ನು ಕುರಿತ ಜೀವಕೋಶಗಳ ಅಧ್ಯಯನವನ್ನು ಮಾಡಲಿದ್ದೇವೆ.
In this article we will discuss the cell, what is a cell, parts of the cell, types of cells, and functions of cells in the Kannada Language.
ಈ ಭೂಮಿಯ ಮೇಲೆ ಜೀವಂತವಾಗಿರುವ ವಸ್ತುಗಳು ಅಂದರೆ ಜೀವಿಗಳು. ಈ ಜೀವಿಗಳಲ್ಲಿ ಕೆಲವು ಉಸಿರಾಡುತ್ತವೆ, ಕೆಲವು ಚಲಿಸುತ್ತವೆ, ಕೆಲವು ಮಾತನಾಡುತ್ತವೆ, ಸಂತಾನೋತ್ಪತ್ತಿ ಮಾಡುತ್ತವೆ, ಬೆಳೆಯುತ್ತವೆ, ಪ್ರಚೋದನೆಗಳಿಗೆ ಪ್ರತಿಕ್ರಿಯಿಸುತ್ತವೆ ಹೀಗೆ ವಿವಿಧ ಜೀವಿಗಳು ವಿವಿಧ ಕಾರ್ಯಗಳನ್ನು ಮಾಡುತ್ತಿರುತ್ತವೆ.
ಆ ವಿವಿಧ ಕಾರ್ಯಗಳನ್ನು ನಿರ್ದಿಷ್ಟ ಅಂಗಗಳು ನಿರ್ವಹಿಸುತ್ತಿರುತ್ತವೆ. ಆ ಅಂಗಗಳ ರಚನೆಯು ಹಲವಾರು ಅಂಗಾಂಶಗಳಿಂದ ಆಗಿರುತ್ತದೆ. ಆ ಅಂಗಾಂಶಗಳ ರಚನೆಯು ಹಲವಾರು ಜೀವಕೋಶಗಳಿಂದ ಆಗಿರುತ್ತದೆ.
ಆ ರಚನಾತ್ಮಕ ಮೂಲ ಘಟಕವಾದ ಜೀವಕೋಶದ ಬಗ್ಗೆ ಸವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
ಪರಿವಿಡಿ
ಜೀವಕೋಶ ಎಂದರೇನು? (What Is Cell In Kannada)
ಜೀವಕೋಶ ಎಂದರೆ ಜೀವಿಯ ರಚನಾತ್ಮಕ ಮತ್ತು ಕಾರ್ಯಾತ್ಮಕ ಘಟಕ. ಇದನ್ನು ಸರಳವಾಗಿ ಹೇಳುವುದಾದರೆ ಜೀವಿ ಮತ್ತು ಜೀವಿಯ ಅಂಗಾಂಶಗಳನ್ನು ರಚಿಸುವ ಅತಿ ಚಿಕ್ಕ ಜೈವಿಕ ಘಟಕಕ್ಕೆ ಜೀವಕೋಶ ಅಥವಾ Cell ಎಂದು ಕರೆಯುತ್ತಾರೆ.
ಜೀವಕೋಶದ ಮೂಲ ರಚನೆಯಿಂದ ಹಿಡಿದು ಅದರ ಪ್ರತಿಯೊಂದು ಕಣದ ಅಥವಾ ಘಟಕದ ಕಾರ್ಯಗಳ ಅಧ್ಯಯನವನ್ನು Cell Biology ಎನ್ನುವರು.
ಜೀವಕೋಶಗಳು ಇಟ್ಟಿಗೆ ಗೋಡೆಗಳಂತಹ ರಚನೆಯನ್ನು ಹೊಂದಿರುತ್ತವೆ.
ಒಂದು ಜೀವಕೋಶವು, ತಾನು ತನ್ನಂತೆಯೇ ಇರುವ ಇನ್ನೊಂದು ಜೀವಕೋಶವನ್ನಾಗಿ Replicate ಅಂದರೆ ನಕಲು ಮಾಡಿಕೊಳ್ಳಬಹುದು.
ಆದ್ದರಿಂದ ಜೀವಕೋಶಗಳನ್ನು ಜೀವನದ ಬಿಲ್ಡಿಂಗ್ ಬ್ಲಾಕ್ Building Blocks ಎಂದು ಕರೆಯಲಾಗುತ್ತದೆ.
ಹಾಗಾದರೆ ಜೀವಕೋಶವನ್ನು ಯಾರು ಅನ್ವೇಷಿಸಿದರು? ಅಯ್ಯೋ! ಹೌದಲ್ವಾ?
ಜೀವಕೋಶಗಳನ್ನು ಕಂಡುಹಿಡಿದವರು ಯಾರು? (Who invented the Cell)
ರಾಬರ್ಟ್ ಹುಕ್ 1665 ರಲ್ಲಿ ಜೀವಕೋಶಗಳನ್ನು ಕಂಡುಹಿಡಿದನು. ಆತನು ಒಂದು ಬಾಟಲ್ ಕಾರ್ಕ್ ತುಂಡನ್ನು ಸೂಕ್ಷ್ಮದರ್ಶಕದ ಅಡಿಯಲ್ಲಿ ಇಟ್ಟು ನೋಡುತ್ತಿದ್ದಾಗ ಆತನಿಗೆ ಸಣ್ಣ ಕೋಣೆಗಳಂತೆ ಇರುವ ರಚನೆಗಳು ಕಂಡುಬಂದವು. ಆ ಸಣ್ಣ ಕೋಣೆಗಳಿಗೆ ಸೆಲ್(Cell) ಎಂದು ಹೆಸರಿಟ್ಟನು.
ಲ್ಯಾಟಿನ್ ನಲ್ಲಿ Cell ಎಂದರೆ Small Room(ಚಿಕ್ಕ ಕೋಣೆ) ಎಂದರ್ಥ.
ರಾಬರ್ಟ್ ಹುಕ್ ಉಪಯೋಗಿಸಿದ್ದ ಸಂಯುಕ್ತ ಸೂಕ್ಷ್ಮದರ್ಶಕ(Compound Microscope)ವು ಸೀಮಿತ Magnification Power ಅನ್ನು ಹೊಂದಿತ್ತು. ಆದ್ದರಿಂದ ರಚನೆಯ ಕುರಿತು ಇನ್ನೂ ಹೆಚ್ಚಿನ ವಿವರಗಳನ್ನು ನೋಡಲು ಸಾಧ್ಯವಾಗಲಿಲ್ಲ.
ಕೊನೆಯದಾಗಿ, ಆ ರಚನೆಗಳು ಜೀವಂತವಲ್ಲದ ಘಟಕಗಳು ಎಂದು ತೀರ್ಮಾನಿಸಿದನು.
ನಂತರದ ದಿನಗಳಲ್ಲಿ, Anton Van Leeuwenhoek ಎಂಬ ವಿಜ್ಞಾನಿಯು, ಜೀವಕೋಶಗಳನ್ನು ಹೆಚ್ಚಿನ Magnification Power ಇರುವ ಸೂಕ್ಷ್ಮದರ್ಶಕದಲ್ಲಿ ನೋಡಿದಾಗ ಕೆಲವು ಜೀವಕೋಶಗಳಲ್ಲಿ ಚಲನೆಯನ್ನು ಗಮನಿಸಿದನು.
ಈ ಸೂಕ್ಷ್ಮ ಕಣಗಳು ಜೀವಂತವಾಗಿವೆ ಎಂದು, ಅವುಗಳಿಗೆ ಪ್ರಾಣಿಕಣಗಳು(Animacules) ಎಂದು ಹೆಸರಿಟ್ಟನು.
1883 ರಲ್ಲಿ, ಸಸ್ಯವಿಜ್ಞಾನಿ ರಾಬರ್ಟ್ ಬ್ರೌನ್ ಜೀವಕೋಶದಲ್ಲಿ ಕೋಶಕೇಂದ್ರ(Nucleus) ಇದೆ ಎಂದು ಹೇಳುವುದರ ಮೂಲಕ ಜೀವಕೋಶದ ರಚನೆಯ ಬಗ್ಗೆ ಮೊದಲು ಒಳನೋಟದ ವಿವರಗಳನ್ನು ನೀಡಿದನು.
ನೆನಪಿರಲಿ: ಜೀವಕೋಶದ ಪಿತಾಮಹ ಎಂದು “ಜಾರ್ಜ್ ಎಮಿಲ್ ಪಲಾಡೆ”(George Emil Palade) ರವರಿಗೆ ಕರೆಯುತ್ತಾರೆ.

ಈ ಭೂಮಿ ಮೇಲೆ ಲಕ್ಷಾಂತರ ಜೀವಿಗಳಿರುತ್ತವೆ. ಅವುಗಳು ಗಾತ್ರದಲ್ಲಿ, ಆಕಾರದಲ್ಲಿ ಚಿಕ್ಕವು-ದೊಡ್ಡವು ಇರುತ್ತವೆ.
ಹಾಗಾದರೆ ಜೀವಕೋಶಗಳ ಸಂಖ್ಯೆಯೂ ಕೂಡ ಹೆಚ್ಚು ಕಡಿಮೆ ಇರಬೇಕಲ್ವಾ? ಏನಂತೀರಾ, ಬನ್ನಿ ತಿಳಿದುಕೊಳ್ಳೋಣ.
ಜೀವಕೋಶಗಳ ಸಂಖ್ಯೆಯ ಆಧಾರದ ಮೇಲೆ ಜೀವಿಗಳನ್ನು ಎರಡು ವಿಧಗಳಾಗಿ ವಿಂಗಡಿಸಬಹುದು.
- ಏಕಕೋಶಿಯ ಜೀವಿಗಳು
- ಬಹುಕೋಶಿಯ ಜೀವಿಗಳು
ಏಕಕೋಶ ಜೀವಿಗಳು ಎಂದರೇನು?
ಒಂದೇ ಜೀವಕೋಶದಿಂದ ಉಂಟಾದ ಜೀವಿಗಳನ್ನು ಏಕಕೋಶ ಜೀವಿಗಳು ಎಂದು ಕರೆಯುತ್ತಾರೆ.
ಉದಾಹರಣೆಗೆ: ಅಮೀಬಾ ಮತ್ತು ಪ್ಯಾರಾಮೀಸಿಯಂ
ಬಹುಕೋಶಿಯ ಜೀವಿಗಳು ಎಂದರೇನು?
ಒಂದಕ್ಕಿಂತ ಹೆಚ್ಚು ಜೀವಕೋಶಗಳಿಂದ ಉಂಟಾದ ಜೀವಿಗಳನ್ನು ಬಹುಕೋಶಿಯ ಜೀವಿಗಳು ಎಂದು ಕರೆಯಲಾಗುತ್ತದೆ.
ಉದಾಹರಣೆಗೆ: ಮನುಷ್ಯರು, ಸಸ್ಯಗಳು ಇತ್ಯಾದಿ.
ಜೀವಕೋಶದ ವಿಧಗಳು (Types Of Cell In Kannada)
ಜೀವಕೋಶಗಳನ್ನು ಸಾಮಾನ್ಯವಾಗಿ ಎರಡು ವಿಧಗಳಾಗಿ ವಿಂಗಡಿಸಲಾಗಿದೆ.
- ಯುಕ್ಯಾರಿಯೋಟಿಕ್(Eukaryotic)
- ಪ್ರೋಕ್ಯಾರಿಯೋಟ್(Prokaryotic)
ಯೂಕ್ಯಾರಿಯೋಟಿಕ್ ಜೀವಕೋಶ: ಪೊರೆಯಿಂದ ಆವೃತವಾಗಿರುವ ಕೋಶಕೇಂದ್ರವಿರುವ ಜೀವಕೋಶವನ್ನು ಯುಕ್ಯಾರಿಯೋಟಿಕ್ ಜೀವಕೋಶ ಎಂದು ಕರೆಯಲಾಗುತ್ತದೆ.
ಪ್ರೋಕ್ಯಾರಿಯೋಟಿಕ್ ಜೀವಕೋಶ: ಪೊರೆರಹಿತ ಕೋಶಕೇಂದ್ರವಿರುವ ಜೀವಕೋಶವನ್ನು ಪ್ರೋಕ್ಯಾರಿಯೋಟ್ ಜೀವಕೋಶ ಎಂದು ಕರೆಯಲಾಗುತ್ತದೆ.
ಹಾಗಾದರೆ ಪ್ರೋಕ್ಯಾರಿಯೋಟಿಕ್ ಮತ್ತು ಯುಕ್ಯಾರಿಯೋಟಿಕ್ ಜೀವಕೋಶಗಳ ನಡುವಿನ ವ್ಯತ್ಯಾಸವೇನು?
ಪ್ರೋಕ್ಯಾರಿಯೋಟಿಕ್ ಜೀವಕೋಶ | ಯೂಕ್ಯಾರಿಯೋಟಿಕ್ ಜೀವಕೋಶ |
---|---|
ಕೋಶಪೊರೆ ಮತ್ತು ಸರಿಯಾದ ಕೋಶಕೇಂದ್ರವಿರುವುದಿಲ್ಲ. ಅನುವಂಶಿಕ ವಸ್ತುಗಳು nucleoid ದಲ್ಲಿರುತ್ತವೆ | ಕೋಶಕೇಂದ್ರವನ್ನು ಹೊಂದಿರುತ್ತದೆ |
ಈ ಜೀವಕೋಶ ಗಾತ್ರದಲ್ಲಿ 0.1 ರಿಂದ 25 ಮೈಕ್ರೋ ಮೀಟರ್ ಇರುತ್ತದೆ | ಗಾತ್ರದಲ್ಲಿ 10-100 ಮೈಕ್ರೋಮೀಟರ್ ಇರುತ್ತದೆ |
ಆನುವಂಶಿಕ ವಸ್ತು DNA ಅಥವಾ RNA | ಆನುವಂಶಿಕ ವಸ್ತು DNA |
ಬಹುತೇಕವಾಗಿ ಏಕಕೋಶಿಯ ಜೀವಗಳಲ್ಲಿ ಕಂಡುಬರುತ್ತವೆ | ಬಹುತೇಕವಾಗಿ ಬಹುಕೋಶಿಯ ಜೀವಿಗಳಲ್ಲಿ ಕಂಡುಬರುತ್ತವೆ |
ಉದಾರಣೆಗೆ ಬ್ಯಾಕ್ಟೀರಿಯಾ, ಸೈನೊಬ್ಯಾಕ್ಟರಿಯ, ಆರ್ಕಿಯ ಇತ್ಯಾದಿ. | ಉದಾಹರಣೆಗೆ ಶಿಲೀಂದ್ರಗಳು, ಪ್ರಾಣಿಗಳು, ಸಸ್ಯಗಳು ಇತ್ಯಾದಿ. |
ಜೀವಕೋಶದ ರಚನೆ ಮತ್ತು ಕಾರ್ಯ
ಈ ಕೆಳಗೆ ಯೂಕ್ಯಾರಿಯೋಟಿಕ್( ಪ್ರಾಣಿಗಳ ಮತ್ತು ಸಸ್ಯಗಳ) ಜೀವಕೋಶದ ರಚನೆ ಮತ್ತು ಕಾರ್ಯಗಳನ್ನು ವಿವರಿಸಲಾಗಿದೆ.
ಪ್ರಾಣಿ ಜೀವಕೋಶ ಚಿತ್ರ & ಭಾಗಗಳು
ಈ ಕೆಳಗೆ ಪ್ರಾಣಿ ಜೀವಕೋಶದ ಚಿತ್ರ ಮತ್ತು ಅದರಲ್ಲಿ ಕನ್ನಡ ಭಾಗಗಳು ಗುರುತಿಸಲಾಗಿದೆ.

ಸಸ್ಯ ಜೀವಕೋಶದ ಚಿತ್ರ ಮತ್ತು ಭಾಗಗಳು
ಸಸ್ಯ ಜೀವಕೋಶಕ್ಕೂ ಪ್ರಾಣಿ ಮತ್ತು ಜೀವಕೋಶಕ್ಕೂ ಕೆಲವು ವ್ಯತ್ಯಾಸಗಳಿವೆ. ಅವುಗಳನ್ನು ತಿಳಿಯುವುದಕ್ಕಿಂತ ಮುಂಚೆ ಜೀವಕೋಶದ ಭಾಗಗಳು ಮತ್ತು ಅವುಗಳ ಕಾರ್ಯಗಳನ್ನು ತಿಳಿದುಕೊಳ್ಳೋಣ.

ನೀವು ಭಾಗಗಳನ್ನು ಮತ್ತು ಕಾರ್ಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕೆಂದರೆ ಮೇಲೆ ನೀಡಲಾದ ಚಿತ್ರಗಳನ್ನು ಗಮನಿಸುವುದು ಅವಶ್ಯಕ.
ಜೀವಕೋಶದ ಭಾಗಗಳು ಮತ್ತು ಕಾರ್ಯ
ಜೀವಕೋಶವು ತನ್ನ ಪ್ರತಿಯೊಂದು ಕಾರ್ಯಗಳಿಗೆ ಪ್ರತ್ಯೇಕ ಕಣದಂಗಗಳು ಅಥವಾ ಘಟಕಗಳನ್ನು ಹೊಂದಿದೆ.
1. ಕೋಶಪೊರೆ ಎಂದರೇನು? Cell Membrane
- ಕೋಶಪೊರೆಯು ಜೀವಕೋಶದ ಮೂಲ ಘಟಕ ವಾಗಿದ್ದು ಸೂಕ್ಷ್ಮ ರಂಧ್ರಗಳಿಂದಾಗಿದೆ.
- ಕೋಶಪೊರೆಯು ಜೀವಕೋಶವನ್ನು ರಕ್ಷಿಸುವದಲ್ಲದೆ ಆಧಾರವನ್ನು ಒದಗಿಸುತ್ತದೆ.
- ಇದು ಜೀವಕೋಶದಲ್ಲಿ ಒಳಬರುವ ಮತ್ತು ಹೊರಹೋಗುವ ವಸ್ತುಗಳ ಚಲನೆಯನ್ನು ನಿಯಂತ್ರಿಸುತ್ತದೆ.
- ಕೋಶಪೊರೆಯು ಜೀವಕೋಶಗಳನ್ನು ಪರಸ್ಪರ ಪ್ರತ್ಯೇಕಿಸುತ್ತದೆ.
- ಇದು ಎರಡು ಜೀವಕೋಶಗಳ ನಡುವೆ ಮತ್ತು ತನ್ನ ಸುತ್ತಲೂ ಗೋಡೆಯಂತಹ ರಚನೆಯನ್ನು ರೂಪಿಸುತ್ತದೆ.
- ಕೋಶಪೊರೆಯು ಜೀವಕೋಶದ ಹೊರ ಹೊದಿಕೆಯಾಗಿದ್ದು, ಇದರಿಂದ ಕೋಶಕೇಂದ್ರ, ಕೋಶದ್ರವ್ಯಗಳಂತಹ ಕಣದಂಗಗಳು ಸುತ್ತುವರೆಯಲ್ಪಟ್ಟಿವೆ.
- ಕೋಶಪೊರೆಯು ಜೀವಕೋಶಕ್ಕೆ ಆಕಾರವನ್ನು ಕೊಡುತ್ತದೆ.
2. ಕೋಶಭಿತ್ತಿ Cell Wall
- ಕೋಶಭಿತ್ತಿಯ ಜೀವಕೋಶದ ರಚನೆಯ ಪ್ರಮುಖ ಭಾಗವಾಗಿದ್ದು, ಸೆಲ್ಯುಲೋಸ್, ಹೆಮಿ ಸೆಲ್ಯುಲೋಸ್ ಮತ್ತು ಪೆಕ್ಟಿನ್ ನಿಂದ ಆಗಿದೆ.
- ಬಹುತೇಕವಾಗಿ ಇದು ಸಸ್ಯಗಳಲ್ಲಿ ಕಂಡುಬರುತ್ತದೆ.
- ಇದು ಕೋಶಪೊರೆ ಮತ್ತು ಇತರ ಕಣದಂಗಗಳನ್ನು ರಕ್ಷಿಸುತ್ತದೆ.
- ಇದು ಸಸ್ಯಜೀವಕೋಶದ ಅತ್ಯಂತ ಹೊರಗಿನ ಪದರವಾಗಿದೆ.
- ಇದು ಜೀವಕೋಶಗಳಿಗೆ ಆಕಾರ ಮತ್ತು ಆಧಾರವನ್ನು ನೀಡುವುದಲ್ಲದೆ, ಜೀವಕೋಶಗಳಿಗೆ ಆಗುವ ಇತರ ಗಾಯಗಳಿಂದ ರಕ್ಷಣೆ ನೀಡುತ್ತದೆ.
3. ಕೋಶದ್ರವ್ಯ Cytoplasm
- ಇದು ಲೋಳೆಯಂತಹ ಪದಾರ್ಥವಾಗಿದ್ದು ಕೋಶಕೇಂದ್ರ ಮತ್ತು ಕೋಶಪೂರೆಯ ನಡುವೆ ಕಂಡುಬರುತ್ತದೆ.
- ಇದರಲ್ಲಿ ಗಾಲ್ಗಿ ಸಂಕೀರ್ಣ, ಮೈಟೋಕಾಂಡ್ರಿಯಾ, ರೈಬೋಸೋಮ್ ಗಳಂತಹ ಕಣದಂಗಗಳು ಕಂಡುಬರುತ್ತವೆ.
- ಹೆಚ್ಚಿನ ರಾಸಾಯನಿಕ ಕ್ರಿಯೆಗಳು ಕೋಶದ್ರವ್ಯ ದಲ್ಲಿ ಉಂಟಾಗುತ್ತವೆ.
4. ಕೋಶಕೇಂದ್ರ Nucleus
- ಸಾಮಾನ್ಯವಾಗಿ ಗೋಳಾಕಾರದ ಜೀವಕೋಶದ ಬಹುಮುಖ್ಯವಾದ ಘಟಕ “ಕೋಶಕೇಂದ್ರ” ಜೀವಕೋಶದ ಮಧ್ಯಭಾಗದಲ್ಲಿರುತ್ತದೆ.
- ಕೋಶಕೇಂದ್ರಪೊರೆಯು ಕೋಶಕೇಂದ್ರವನ್ನು ಕೋಶದ್ರವ್ಯದಿಂದ ಪ್ರತ್ಯೇಕ ಮಾಡುತ್ತದೆ.
- ನೆನಪಿರಲಿ, ಕೋಶಕೇಂದ್ರಪೊರೆ ಮತ್ತು ಕೋಶಪೂರೆಗಳೆರಡು ಬೇರೆ ಬೇರೆ. ಆದರೆ ಕೋಶಕೆಂದ್ರಪೊರೆ ಕೂಡ ಸೂಕ್ಷ್ಮ ರಂಧ್ರಗಳಿಂದ ಕೂಡಿದ್ದೂ, ಕೋಶದ್ರವ್ಯ ಮತ್ತು ಕೋಶಕೇಂದ್ರದ ಒಳಭಾಗದ ನಡುವೆ ವಸ್ತುಗಳ ಚಲನೆಗೆ ಅನುವುಮಾಡಿಕೊಡುತ್ತದೆ.
- ಕೋಶಕೇಂದ್ರ ಆನುವಂಶಿಕ ವಸ್ತುವಾದ DNA ವನ್ನು ಒಳಗೊಂಡಿದೆ.
- ಕೋಶಕೇಂದ್ರವು ಜೀವಕೋಶಗಳಿಗೆ ಬೆಳವಣಿಗೆ, ಪ್ರೌಢತೆ, ವಿಭಜನೆ ಮತ್ತು ಸಾಯುವ ಸಂಕೇತಗಳನ್ನು ಕಳುಹಿಸುತ್ತದೆ.
5. ವರ್ಣತಂತುಗಳು Chromosomes
- ದಾರದ ಎಳೆಯ ತರಹದ ರಚನೆಗಳನ್ನು ಹೊಂದಿರುವ ವರ್ಣತಂತುಗಳು ಸಸ್ಯ ಮತ್ತು ಪ್ರಾಣಿಗಳ ಜೀವಕೋಶದ ಕೋಶಕೇಂದ್ರದಲ್ಲಿ ಇರುತ್ತವೆ.
- ವರ್ಣತಂತುಗಳು ವಂಶವಾಹಿಗಳನ್ನು ಹಿಡಿದಿಟ್ಟುಕೊಂಡಿರುತ್ತವೆ.
- ಒಂದು ಜೀವಿಯ ಲಿಂಗವನ್ನು ನಿರ್ಧರಿಸುವಲ್ಲಿ ವರ್ಣತಂತುಗಳು ಮಹತ್ವದ ಪಾತ್ರವಹಿಸುತ್ತವೆ.
- ಪ್ರತಿ ಮಾನವ ಜೀವಕೋಶವು 23 ಜೋಡಿ ವರ್ಣತಂತುಗಳನ್ನು ಹೊಂದಿರುತ್ತದೆ.
6. ರೈಬೋಸೋಮ್ Ribosome
- ರೈಬೋಸೋಮ್ ಗಳು ಕೇವಲ ಎಲೆಕ್ಟ್ರಾನಿಕ್ ಸೂಕ್ಷ್ಮದರ್ಶಕದಲ್ಲಿ ಮಾತ್ರ ಕಾಣಿಸುವಂತಹ ಪೊರೆರಹಿತ ಕಣದಂಗಗಳು.
- ರೈಬೋಸೋಮ್ ಗಳು ಪ್ರೋಟೀನ್ ಗಳನ್ನು ಉತ್ಪಾದಿಸುತ್ತವೆ.
- ಆದ್ದರಿಂದ ರೈಬೋಸೋಮ್ ಗಳನ್ನು ಜೀವಕೋಶದ ಪ್ರೋಟೀನ್ ಕಾರ್ಖಾನೆಗಳು (Protein Factories) ಎಂದು ಕರೆಯಲಾಗುತ್ತದೆ.
7. ಲೈಸೋಸೋಮ್ ಗಳು Lysosomes
- ಲೈಸೋಸೋಮ್ ಒಂದು ಪೊರೆಯಿಂದ ಬಂಧಿಸಲ್ಪಟ್ಟ ಕಣದಂಗ ವಾಗಿದೆ. ಇವುಗಳು ಜೀರ್ಣಕಾರಿ (Digestive Enzymes) ಕಿಣ್ವಗಳನ್ನು ಒಳಗೊಂಡಿವೆ.
- ಇವುಗಳು ವಿಭಜನೆಗೊಂಡ ಜೀವಕೋಶ ಅಥವಾ ತನ್ನದೇ ಜೀವಕೋಶವನ್ನು ನುಂಗುವಂತಹ ಸಾಮರ್ಥ್ಯವನ್ನು ಹೊಂದಿವೆ. ಆದ್ದರಿಂದ ಲೈಸೋಸೋಮ್ ಗಳನ್ನು ಜೀವಕೋಶದ “ಆತ್ಮಹತ್ಯಾ ಸಂಚಿಗಳು/ಚೀಲಗಳು ಎಂದು ಕರೆಯುತ್ತಾರೆ.
8. ಮೈಟೋಕಾಂಡ್ರಿಯಾ Mitochondria
ಮೈಟೋಕಾಂಡ್ರಿಯಾ ವಾಯುವಿಕ ಉಸಿರಾಟ ನಡೆಯುವ ಸ್ಥಳವಾಗಿದೆ. ಇದು ಜೀವಕೋಶೀಯ ಶಕ್ತಿಯಾದ ATP ಬಿಡುಗಡೆ ಮಾಡುತ್ತದೆ. ಆದ್ದರಿಂದ ಮೈಟೋಕಾಂಡ್ರಿಯವನ್ನು “ಜೀವಕೋಶದ ಶಕ್ತಿ ಗೃಹ “(The Power House) ಎಂದು ಕರೆಯುತ್ತಾರೆ.
9. ಕ್ಲೋರೋಪ್ಲಾಸ್ಟ್ Chloroplast
ಕ್ಲೋರೋಪ್ಲಾಸ್ಟ್ ಸಸ್ಯಗಳಲ್ಲಿ ಮತ್ತು ಕೆಲವು ಶಿಲೀಂದ್ರ ಗಳಲ್ಲಿ ಕಂಡು ಬರುವ ಪ್ರಮುಖ ಕಣದಂಗ. ಇದೇ ಕಣದಂಗದಲ್ಲಿ ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಯುತ್ತದೆ.
ಈ ಕಣದಂಗ ದ್ಯುತಿಸಂಶ್ಲೇಷಣೆ ಕ್ರಿಯೆಗೆ ಬೇಕಾದ ಪ್ರಮುಖ ವರ್ಣದ್ರವ್ಯ ಪತ್ರಹರಿತು(Chlorophyll) ಅನ್ನು ಹೊಂದಿದೆ.
10. ಗಾಲ್ಗಿ ಸಂಕೀರ್ಣ Golgi Complex
ಗಾಲ್ಗಿ ಸಂಕೀರ್ಣ ಹೆಚ್ಚಾಗಿ ಯುಕ್ಯಾರಿಯೋಟಿಕ್ ಜೀವಕೋಶಗಳಲ್ಲಿ ಕಂಡುಬರುತ್ತದೆ. ಇದು ಜೀವಕೋಶದಿಂದ ಪ್ರೋಟೀನ್ ಲಿಪಿಡ್ ಮತ್ತಿತರ ಕಣಗಳನ್ನು ಸಾಗಿಸುತ್ತದೆ.
ಆದ್ದರಿಂದ ಗಾಲ್ಗಿ ಸಂಕೀರ್ಣವನ್ನು “ಜೀವಕೋಶದ ಅಂಚೆ ಕಚೇರಿ(Post Office Of The Cell )”ಎಂದು ಕರೆಯುತ್ತಾರೆ.
11. ರಸದಾನಿ Vacuole
- ರಸದಾನಿಯು ಪೊರೆಯಿಂದ ಆವೃತ್ತವಾದ ಜೀವಕೋಶದ ಒಂದು ಕಣದಂಗ. ಕೆಲವೊಮ್ಮೆ ಒಂದೇ ರಸದಾನಿ ಜೀವಕೋಶದ ಬಹಳಷ್ಟು ಜಾಗವನ್ನು ಆಕ್ರಮಿಸಿಕೊಳ್ಳುತ್ತದೆ.
- ಸಸ್ಯಜೀವಕೋಶದ ಚಿತ್ರವನ್ನು ಒಮ್ಮೆ ಗಮನಿಸಿ. ಜೀವಕೋಶಗಳಲ್ಲಿ ಆಹಾರ, ನೀರು ಮತ್ತು ಇತರ ತಾಜ್ಯ ವಸ್ತುಗಳನ್ನು ಈ ರಸದಾನಿಗಳು ಸಂಗ್ರಹಿಸಿಟ್ಟುಕೊಳ್ಳುತ್ತವೆ.
12. ಎಂಡೊಪ್ಲಾಸ್ಮಿಕ್ ರೆಟಿಕ್ಯುಲುಂ Endoplasmic Reticulum
- ಇದು ಒರಟು ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್ ಮತ್ತು ಮೆದು ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್ ಗಳಿಂದ ಮಾಡಲ್ಪಟ್ಟ ಒಂದು ಕಣದಂಗ.
- ಇದು ಜೀವಕೋಶದ ಸಾಗಾಣಿಕಾ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕಾರ್ಬೋಹೈಡ್ರೇಟ್, ಲಿಪಿಡ್ ಗಳು, ಸ್ಟಿರಾಯ್ಡ್ ಗಳು ಮತ್ತು ಪ್ರೋಟೀನ್ ಗಳ ಸಂಶ್ಲೇಷಣೆಯಲ್ಲಿ ಇದು ಮಹತ್ವದ ಪಾತ್ರವನ್ನು ನಿಭಾಯಿಸುತ್ತದೆ.
ಈ ವರೆಗೆ ಜೀವಕೋಶದ ಪ್ರಮುಖ ಕಣದಂಗಗಳ ಮತ್ತು ಭಾಗಗಳ ಕಾರ್ಯಗಳನ್ನು ತಿಳಿದುಕೊಂಡೆವು. ಆದರೆ ಒಟ್ಟಾರೆಯಾಗಿ ಜೀವಕೋಶದ ಕಾರ್ಯಗಳೇನು? ಎಂಬುದೇ ಗೊತ್ತಾಗಲಿಲ್ಲ ಆಲ್ವಾ?
ನೋಡಿ, ಈ ಕೆಳಗೆ ನೀಡಲಾಗಿದೆ.
ಜೀವಕೋಶದ ಕಾರ್ಯಗಳು (Functions Of The Cell In Kannada)
ಜೀವಕೋಶಗಳು ಜೀವಿಯ ಬೆಳವಣಿಗೆ ಮತ್ತು ವೃದ್ಧಿಗೆ ಅಗತ್ಯವಾದ ಪ್ರಮುಖ ಕಾರ್ಯಗಳನ್ನು ಮಾಡುತ್ತವೆ. ಅವುಗಳಲ್ಲಿ ಕೆಲವು ಜೀವಕೋಶದ ಪ್ರಮುಖ ಕಾರ್ಯಗಳು ಹೀಗಿವೆ:
- ರಚನೆ ಮತ್ತು ಆಧಾರವನ್ನು ಒದಗಿಸುತ್ತದೆ.
- ಬೆಳವಣಿಗೆಗೆ ಬೇಕಾದ ಜೈವಿಕ ವಿಭಜನೆ(Mitosis)ಯನ್ನು ಒದಗಿಸುತ್ತದೆ.
- ರಾಸಾಯನಿಕಗಳ ಸಾಗಾಣಿಕೆಗೆ ಅವಕಾಶ ನೀಡುತ್ತದೆ.
- ಶಕ್ತಿಯ ಉತ್ಪಾದನೆ
- ಸಂತಾನೋತ್ಪತ್ತಿಗೆ ಸಹಾಯ ಮಾಡುತ್ತದೆ
- ಇತ್ಯಾದಿ.
ಜೀವಕೋಶದ ಕಾರ್ಯಗಳೇನು? ಎಂಬುದು ಗೊತ್ತಾಯಿತು. ಆದರೆ ಸಸ್ಯ ಜೀವಕೋಶ ಮತ್ತು ಪ್ರಾಣಿ ಜೀವಕೋಶಗಳ ನಡುವಿನ ವ್ಯತ್ಯಾಸವೇ ಇನ್ನುವರೆಗೂ ಗೊತ್ತಾಗಲಿಲ್ಲಾ, ಅಲ್ವಾ?
ಬನ್ನಿ ಅದನ್ನೂ ನೋಡೇಬಿಡೋಣ!
ಸಸ್ಯ ಜೀವಕೋಶ | ಪ್ರಾಣಿ ಜೀವಕೋಶ |
---|---|
ಸಾಮಾನ್ಯವಾಗಿ ಪ್ರಾಣಿ ಜೀವಕೋಶಗಳಿಗಿಂತ ದೊಡ್ಡದಾಗಿರುತ್ತವೆ | ಸಾಮಾನ್ಯವಾಗಿ ಸಸ್ಯ ಜೀವಕೋಶಗಳಿಗಿಂತ ಚಿಕ್ಕದಾಗಿರುತ್ತವೆ. |
ಕ್ಲೋರೋಪ್ಲಾಸ್ಟ್ ಹೊಂದಿರುತ್ತವೆ | ಕ್ಲೋರೋಪ್ಲಾಸ್ಟ್ ಹೊಂದಿರುವುದಿಲ್ಲ |
ಕೋಷಪೂರೆ ಹೊಂದಿರುತ್ತವೆ | ಕೋಶಪೊರೆ ಹೊಂದಿರುವುದಿಲ್ಲ |
ದೊಡ್ಡದಾದ ರಸದಾನಿ ಇರುತ್ತದೆ | ರಸದಾನಿ ಇರುವುದಿಲ್ಲ( ಕೆಲವೊಮ್ಮೆ ಚಿಕ್ಕ ರಸದಾನಿ ಕಂಡುಬರುತ್ತದೆ) |
ಸ್ಥಿರವಾದ ಆಕಾರ ಇರುತ್ತದೆ. | ಸ್ಥಿರವಾದ ಆಕಾರವಿರುವುದಿಲ್ಲ. |
FAQ On ಜೀವಕೋಶ ಎಂದರೇನು ಜೀವಕೋಶದ ಭಾಗಗಳು ರಚನೆ ಮತ್ತು ಕಾರ್ಯ
Q1: ಜೀವಕೋಶದ ಮೂರು ಪ್ರಮುಖ ಭಾಗಗಳು ಯಾವುವು?
1. ಕೋಶಪೊರೆ
2. ಕೋಶಕೇಂದ್ರ
3. ಕೋಶದ್ರವ್ಯ
Q2: ಜೀವಕೋಶದ ಎಲ್ಲಾ ಚಟುವಟಿಕೆಗಳ ನಿಯಂತ್ರಣ ಕೇಂದ್ರ ಯಾವುದು?
ಕೋಶಕೇಂದ್ರವು ಜೀವಕೋಶದ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ಆದ್ದರಿಂದ ಕೋಶಕೇಂದ್ರವನ್ನು ಜೀವಕೋಶದ ಮೆದಳು ಎಂದೂ ಕರೆಯುತ್ತಾರೆ.
Q3: ಸಸ್ಯಗಳಲ್ಲಿ ಅನಿಲ ವಿನಿಮಯಕ್ಕೆ ಕಾರಣವಾದ ಜೀವಕೋಶಗಳು ಯಾವುವು?
ಸಸ್ಯಗಳಲ್ಲಿ ಪತ್ರಹರಿತುವಿನಲ್ಲಿರುವ Stomata ದ ಮೂಲಕ ಅನಿಲ ವಿನಿಮಯ ನಡೆಯುತ್ತದೆ. ಆದರೆ ಇದು ಜೀವಕೋಶವಲ್ಲ, ಬದಲಾಗಿ ಇದು ಜೀವಕೋಶದಲ್ಲಿ ಕಂಡುಬರುವ ಕ್ಲೋರೋಪ್ಲಾಸ್ಟ್ ಕಣದಂಗದ ಒಳಗಿರುವ ಭಾಗ.
Q4: ಕಣದಂಗಗಳು ಎಂದರೇನು?
ಜೀವಕೋಶದ ಘಟಕಗಳಿಗೆ ಕಣದಂಗಗಳು ಎಂದು ಕರೆಯಬಹುದು. ಉದಾಹರಣೆಗೆ ಕೋಶಕೇಂದ್ರ, ಕೋಶದ್ರವ್ಯ, ಕೋಷಪೂರೆ ಇತ್ಯಾದಿ.
Q5: ಕೋಳಿ ಮೊಟ್ಟೆಯು ಎಷ್ಟು ಜೀವಕೋಶಗಳಿಂದ ಆಗಿರುತ್ತದೆ?
ಕೋಳಿ ಮೊಟ್ಟೆಯು ಒಂದೇ ಒಂದು ಜೀವಕೋಶದಿಂದ ಆಗಿದೆ.
ಈ “ಜೀವಕೋಶ ಎಂದರೇನು?, ಜೀವಕೋಶದ ರಚನೆ ಮತ್ತು ಕಾರ್ಯ ಹಾಗೂ ಜೀವಕೋಶದ ಭಾಗಗಳು” ಲೇಖನ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ನಿಮ್ಮ ಸಲಹೆ ಅಥವಾ ಸೂಚನೆಗಳೆನಾದರು ಇದ್ದಲ್ಲಿ Comment ಮಾಡುವುದರ ಮೂಲಕ ನಮಗೆ ತಿಳಿಸಿ.
Super sir and tqu 😍