ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ | Rashtriya Bhavaikyate Prabandha In Kannada

ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ ರಾಷ್ಟ್ರೀಯ ಭಾವೈಕ್ಯತೆಯನ್ನು ಬಲಪಡಿಸುವ ಕ್ರಮಗಳು ರಾಷ್ಟ್ರೀಯ ಭಾವೈಕ್ಯತೆಯನ್ನು ಬಲಪಡಿಸುವ ಕ್ರಮಗಳು Rashtriya Bhavaikyate Prabandha In Kannada.

ಪೀಠಿಕೆ

ಭಾರತವನ್ನು ವಿವಿಧತೆಯಲ್ಲಿ ಏಕತೆಯನ್ನು ಕಾಣುವ ರಾಷ್ಟ್ರ ಎಂದು ಹೇಳುತ್ತಾರೆ. ವಿಭಿನ್ನ ಸಂಸ್ಕೃತಿ, ವಿಭಿನ್ನ ಜೀವನಕ್ರಮ ಇದ್ದರೂ ನಾವೆಲ್ಲಾ ಒಂದೇ ಎಂಬಂತೆ ಬಾಳುವುದು ನಮ್ಮ ಈ ಭಾರತದ ದೇಶದ ವಿಶೇಷತೆಯಾಗಿದೆ.

ಭರತ ಖಂಡದದಲ್ಲಿ ವಾಸಿಸುವವರು ವಿಭಿನ್ನ ಹಾಗೂ ವೈವಿಧ್ಯಮಯ ಸಂಸ್ಕೃತಿಯನ್ನು ಆಚರಿಸುತ್ತಾರೆ. ಆದರೆ ದೇಶದ ವಿಚಾರಕ್ಕೆ ಬಂದರೆ ನಾವೆಲ್ಲ ಒಂದೇ ತಾಯಿಯ ಮಕ್ಕಳು ಎಂಬ ಒಗ್ಗಟ್ಟು, ಐಕ್ಯತೆಯನ್ನು ಸಾರುತ್ತಾರೆ. ಹೀಗಾಗಿಯೇ ‘ಭಾರತವನ್ನು ಭಾವೈಕ್ಯತೆಯ ದೇಶ‘ ಎಂದು ಕರೆಯುತ್ತಾರೆ.

ಭಾರತದ ಅಣು ಅಣುವಲ್ಲೂ ಇಲ್ಲಿಯ ಮಕ್ಕಳ ಹೃದಯ ಬಡಿತವಿದೆ. ಏಕತೆಯ ಮನೋಭಾವ ಎಲ್ಲರನ್ನೂ ಬೆಸೆಯುತ್ತದೆ. ಭಾವೈಕ್ಯತೆಯೇ ಭಾರತದ ಶಕ್ತಿಯಾಗಿದೆ.

ವಿವಿಧ ಜಾತಿ, ಜನಾಂಗದ ಮಕ್ಕಳು ಒಟ್ಟಿಗೆ ವಾಸಿಸುತ್ತಾರೆ. ತಮ್ಮ ನಾಡು, ನುಡಿ ಹಾಗೂ ಸಂಸ್ಕೃತಿಯ ರಕ್ಷಣೆಯ ಜೊತೆಗೆ ದೇಶಕ್ಕಾಗಿ ಒಂದಾಗಿ ನಿಲ್ಲುತ್ತಾರೆ.

ಭಾರತ ವಿಶ್ವದ ಅತ್ಯಂತ ಹಳೆಯ ನಾಗರಿಕತೆ ಹೊಂದಿದ ದೇಶವಾಗಿದೆ. ವಿವಿಧ ಜನಾಂಗದವರು ಇಲ್ಲಿ ಒಟ್ಟಾಗಿ ಬಾಳುತ್ತಾರೆ. ವೈವಿಧ್ಯಮಯ ನಾಗರಿಕತೆ ಇಲ್ಲಿದೆ.

ಸುಮಾರು 1650 ಭಾಷೆ ಮತ್ತು ಉಪಭಾಷೆಗಳನ್ನು ಮಾತನಾಡುವ ಜನರು ಭಾರತದಲ್ಲಿ ವಾಸಿಸುತ್ತಾರೆ. ಸಂಸ್ಕೃತಿ, ಧರ್ಮ, ಭಾಷೆಯ ವೈವಿಧ್ಯತೆಯಿಂದ ಬೇರ್ಪಟ್ಟರೂ ಸಹ ಎಲ್ಲರೂ ಒಂದೇ ಎಂಬ ಒಗ್ಗಟ್ಟೇ ಇಲ್ಲಿನ ತಾಕತ್ತಾಗಿದೆ.

ಸಹೋದರತ್ವ, ಭಾತೃತ್ವ ಭಾವನೆ, ಪರಸ್ಪರ ಪ್ರೀತಿ, ನಂಬಿಕೆಯಿಂದ ಬದುಕುವುದನ್ನು ಇಲ್ಲಿಯ ಜನರು ರೂಢಿಸಿಕೊಂಡು ಬಂದಿದ್ದಾರೆ.

ಕನ್ನಡ ಪ್ರಬಂಧ, ಸಾಮಾನ್ಯ ಜ್ಞಾನ, ತಂತ್ರಜ್ಞಾನ ಹಾಗೂ ಕನ್ನ್ನಡ ವ್ಯಾಕರಣಕ್ಕೆ ಸಂಬಂಧಿಸಿದ ಮಾಹಿತಿಗಳ Daily Update ಪಡೆಯಲು ನಮ್ಮ WhatsApp Group Join ಆಗಿ.

ಬನ್ನಿ Rashtriya Bhavaikyate Prabandha In Kannada ಬನ್ನು ಸವಿವರವಾಗಿ ನೋಡೋಣ

Also Read: ಗ್ರಂಥಾಲಯದ ಮಹತ್ವ ಕುರಿತು ಪ್ರಬಂಧ


[2023] Refer ಮಾಡಿ 100% Upstox ದಿಂದ ಹಣಗಳಿಸುವುದು ಹೇಗೆ?
Refer ಮಾಡಿ Upstox ದಿಂದ ಹಣಗಳಿಸುವುದು ಹೇಗೆ?

ವಿಷಯದ ಬೆಳವಣಿಗೆ

ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ

ಭಾರತ ಸಾರ್ವಭೌಮ, ಪ್ರಜಾಪ್ರಭುತ್ವ, ಜಾತ್ಯತೀಯ ರಾಷ್ಟ್ರವಾಗಿದೆ. ಇದರಿಂದಾಗಿ ಇಲ್ಲಿ ಎಲ್ಲಾ ಜನರಿಗೆ ಸಮಾನ ಹಕ್ಕು, ಕರ್ತವ್ಯ ಒದಗಿಸಲಾಗಿದೆ. ಧರ್ಮ, ಜಾತಿ, ಬಣ್ಣ, ಭಾಷೆ, ಪಂಥ ಮತ್ತು ಪ್ರದೇಶದ ತಾರತಮ್ಯಕ್ಕೆ ಅವಕಾಶವಿಲ್ಲ.

ಇಂತಹ ವಿಶಾಲ ವೈವಿಧ್ಯತೆಯ ನಡುವೆಯೂ ಭಾರತ ಏಕತೆಯನ್ನು ಹೊಂದಿದೆ.

ಭ್ರಷ್ಟಾಚಾರ, ಉಗ್ರವಾದ, ಭಯೋತ್ಪಾದನೆಯಂತ ಕೆಟ್ಟದ್ದರ ಹೊರತಾಗಿಯೂ ಪ್ರತಿ ರಾಜ್ಯದ ಜನರು ದೇಶದ ವಿಚಾರದಲ್ಲಿ ಒಗ್ಗಟ್ಟು ಎತ್ತಿ ಹಿಡಿಯುತ್ತಾರೆ.

ಪಂಜಾಬ್, ತಮಿಳುನಾಡು, ಕರ್ನಾಟಕ, ಅಸ್ಸಾಂ, ಸಿಕ್ಕಿಂ, ಕಾಶ್ಮೀರ ಸೇರಿದಂತೆ ಹಲವು ರಾಜ್ಯಗಳು ತಮ್ಮದೇ ಸಂಸ್ಕೃತಿ, ಭಾಷೆ, ಪದ್ಧತಿ, ಆಚರಣೆ, ಪರಂಪರೆ ಹೊಂದಿವೆ.

ಇಲ್ಲಿಯ ಜನರು ಸಂಪತ್ತಿಗಿಂತ ಹೆಚ್ಚು ಆಧ್ಯಾತ್ಮ, ಕರ್ಮ ಮತ್ತು ಆಚರಣೆ ಹಾಗೂ ಸಂಸ್ಕಾರಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಧಾರ್ಮಿಕ ಸಹಿಷ್ಣುತೆಯು ಈ ನೆಲದ ವಿಶಿಷ್ಟ ಗುಣವಾಗಿದೆ. 

ಭಾವೈಕ್ಯತೆ ಎಂದರೇನು? 

ಭಾರತದಲ್ಲಿ ಹಿಂದೂಗಳೇ ಬಹುಸಂಖ್ಯಾತರು. ಹೀಗಿದ್ದಾಗಲೂ ಸಹ ಎಲ್ಲ ಜಾತಿ, ಜನಾಂಗ, ಧರ್ಮದ ಜನರು ಒಗ್ಗಟ್ಟಿನಿಂದ ಬದುಕುತ್ತಾರೆ. ಅಸಮಾನತೆಯನ್ನು ಮೀರಿ ಸಾಮರಸ್ಯದ ಬದುಕು ಕಾಣುವುದೇ ಮಿಗಿಲು ಎಂಬುದು ಇಲ್ಲಿನ ಜನರ ನಂಬುಗೆ.

ಸಮಗ್ರತೆಯ ಅಸ್ತಿತ್ವ ಹೊಂದಿರುವ ದೇಶ ನಮ್ಮ ಈ ಭಾರತ. 

“ಈ ನೆಲದ ಸೂರಿನಡಿ ವಿವಿಧ ಜಾತಿ, ಧರ್ಮ, ಸಮುದಾಯ, ಭಾಷೆ, ಸಂಸ್ಕೃತಿ, ಜೀವನಶೈಲಿ, ನಂಬಿಕೆ, ಆಚರಣೆ ಇರುವ ಜನರು ಭಾರತಮಾತೆಯ ಮಕ್ಕಳು ನಾವು ಎಂದು ಒಟ್ಟಾಗಿ ಸಾಮರಸ್ಯದಿಂದ ಬದುಕುವುದೇ” ಭಾವೈಕ್ಯತೆ ಆಗಿದೆ. 

ನಾವೆಲ್ಲಾ ಒಂದು ಎಂದು ಬದುಕುವುದನ್ನೇ ಭಾವೈಕ್ಯತೆ ಎಂದು ಕರೆಯುತ್ತಾರೆ.


ರಾಷ್ಟ್ರೀಯ ಭಾವೈಕ್ಯತೆ ಎಂದರೇನು? 

ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ
ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ

ಒಂದು ದೇಶದ ಜನರು ಬಹು ಸಂಸ್ಕೃತಿ ಹೊಂದಿದ್ದರೂ ಸಹ ದೇಶ ನನ್ನದು ಎಂಬ ಭಾವನೆಯೊಂದಿಗೆ ನೆಲ-ಜಲಕ್ಕಾಗಿ ಪ್ರಾಣ ತ್ಯಾಗ, ಸಮರ್ಪಣಾ ಭಾವ ಹೊಂದಿರುವುದೇ ರಾಷ್ಟ್ರೀಯ ಭಾವೈಕ್ಯತೆ ಆಗಿದೆ.

ಅಥವಾ

ವಿಭಿನ್ನ ಸಂಸ್ಕೃತಿ, ಪರಂಪರೆ ಹೊಂದಿರುವ ಜನರು ದೇಶದ ಭದ್ರತೆ ಹಾಗೂ ರಾಷ್ಟ್ರದ ಹಿತಾಸಕ್ತಿಗಾಗಿ ಒಟ್ಟಾಗಿ ಹೋರಾಡುವುದು ಮತ್ತು ಭೇದಭಾವವಿಲ್ಲದೇ ಜೀವನ ನಡೆಸುವುದನ್ನೇ ರಾಷ್ಟ್ರೀಯ ಭಾವೈಕ್ಯತೆ ಎನ್ನುತ್ತಾರೆ. 

ಅಥವಾ

“ಆಚಾರ ವಿಚಾರ, ವೇಷಭೂಷಣ, ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್, ಬೌದ್ಧ, ಜೈನ ಹೀಗೆ ಎಲ್ಲಾ ವರ್ಗದ ಜನರು ನಾವೆಲ್ಲ ಭಾರತೀಯರು ಎಂಬ ಭಾವನೆಯಿಂದ ಒಟ್ಟಾಗಿ ಸಹಬಾಳ್ವೆ ನಡೆಸುವುದೇ” ರಾಷ್ಟ್ರೀಯ ಭಾವೈಕ್ಯತೆ ಆಗಿದೆ. 

“ವಸುದೈವ ಕುಟುಂಬಕಂ” ಎಂಬ ಮೂಲ ಮಂತ್ರದ ಆಧಾರದ ಮೇಲೆ ಈ ನಾಡಿನ ಜನರು ಸಹಿಷ್ಣುತೆಯಿಂದ ಬದುಕುತ್ತಿದ್ದಾರೆ. 

ರಾಷ್ಟ್ರೀಯ ಭಾವೈಕ್ಯತೆ ಅವಶ್ಯಕತೆ Rashtriya Bhavaikyate Prabandha In Kannada

  • ಬಹುಸಂಸ್ಕೃತಿ, ಧರ್ಮ, ಭಾಷೆ, ಜಾತಿಯ ಮಧ್ಯೆ ಬರುವ ತಾರತಮ್ಯ, ಜಗಳ ಹಾಗೂ ಕದನಗಳನ್ನು ಹೋಗಲಾಡಿಸಿ ಒಗ್ಗಟ್ಟಿನಿಂದ ಜೀವನ ಸಾಗಿಸಲು ಭಾವೈಕ್ಯತೆ ಬೇಕು.
  • ಕೆಲಸದ ಸ್ಥಳ, ಸಂಘಟನೆ ಮತ್ತು ಸಮಾಜ – ಸಮುದಾಯದಲ್ಲಿ ಜನರ ನೈತಿಕತೆ ಹೆಚ್ಚಿಸಲು ರಾಷ್ಟ್ರೀಯ ಭಾವೈಕ್ಯತೆ ಬೇಕು.
  • ಸಮನ್ವಯತೆ, ಸಂಬಂಧ, ಕಾರ್ಯಕ್ಷಮತೆ, ಉತ್ಪಾದಕತೆ, ಅಭಿವೃದ್ಧಿ ಗುರಿ ಮುಟ್ಟಲು, ಜೀವನಶೈಲಿ ಸುಧಾರಣೆಗೆ ರಾಷ್ಟ್ರೀಯ ಭಾವೈಕ್ಯತೆ ಅವಶ್ಯಕತೆ ಇದೆ.
  • ಪ್ರೀತಿ ಮತ್ತು ಸಹನೆ, ಸೌಹಾರ್ದತೆ, ನಾವೀನ್ಯತೆ, ವಿಭಿನ್ನ ದೃಷ್ಟಿಕೋನಗಳಲ್ಲಿ ಮುಕ್ತ ಆಲೋಚನೆ, ಪರಸ್ಪರ ಗೌರವ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಲು ರಾಷ್ಟ್ರೀಯ ಭಾವೈಕ್ಯತೆಯ ಅವಶ್ಯಕತೆ ಇದೆ.
  • ಎಲ್ಲಾ ಜಾತಿ, ಧರ್ಮದವರು ಭಿನ್ನಾಭಿಪ್ರಾಯ, ಆಂತರಿಕ ವೈರುದ್ಯಗಳನ್ನು ಬದಿಗಿರಿಸಿ ಸಾಮರಸ್ಯದಿಂದ ಬಾಳಲು ಬೇಕು.
  • ಬಾಲ್ಯದಿಂದಲೇ ಭಾವೈಕ್ಯತೆ, ವಿವಿಧತೆಯಲ್ಲಿ ಏಕತೆ ಹಾಗೂ ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಳ್ಳಲು ಅವಶ್ಯಕತೆ ಇದೆ.
  • ಭಾರತದ ಸಂವಿಧಾನದ ಚೌಕಟ್ಟಿನಲ್ಲಿ ವಿಶಾಲ ಭೌಗೋಳಿಕ ಹಾಗೂ ಪ್ರಾಕೃತಿಕ ವೈವಿಧ್ಯತೆಯನ್ನು ಮತ್ತು ಅಖಂಡತೆಯನ್ನು ಉಳಿಸಿಕೊಂಡು ಹೋಗಲು ಅವಶ್ಯಕತೆಯಿದೆ.
  • ರಾಷ್ಟ್ರೀಯ ಸಮಸ್ಯೆಗಳು, ನೆಲ, ಜಲ, ಗಡಿ, ಪ್ರಾದೇಶಿಕ, ಕೋಮುಗಲಭೆ, ಭಾಷೆ, ಭ್ರಷ್ಟಾಚಾರ, ಭಯೋತ್ಪಾದನೆಯಂತ ವಿಷಯಗಳ ವಿವಾದ ಬಗೆಹರಿಸಿ ಒಗ್ಗಟ್ಟಿನಿಂದ ನಡೆಯಲು ಅವಶ್ಯಕತೆಯಿದೆ.

ರಾಷ್ಟ್ರೀಯ ಭಾವೈಕ್ಯತೆ ಲಕ್ಷಣಗಳು

  1. ವಿವಿಧತೆಯಲ್ಲಿ ಏಕತೆ ಕಾಣುವುದು
  2. ವಿಘಟನೆ ಹಾಗೂ ದ್ವೇಷ, ಭೇದವಿಲ್ಲದೆ ಬದುಕುವುದು
  3. ವಿವಿಧ ರಾಜ್ಯ, ಸಮಯದಾಯ, ಭಾಷೆ ಮತ್ತು ಜನಾಂಗಗಳನ್ನು ಒಂದೇ ಆಡಳಿತದಡಿ ತರುವುದು
  4. ಜಾತಿ ವ್ಯವಸ್ಥೆ, ಆಧ್ಯಾತ್ಮ, ಕುಟುಂಬ, ಆರ್ಥಿಕತೆ, ಕೃಷಿ, ಆಟೋಟ, ಪರಂಪರೆ, ಚಟುವಟಿಕೆಗಳ ವೈವಿಧ್ಯತೆ
  5. ಹಬ್ಬಗಳು, ಸಂಪ್ರದಾಯ, ಆಚರಣೆ ಮತ್ತು ಪದ್ಧತಿಯ ವೈವಿಧ್ಯತೆ
  6. ಭೌಗೋಳಿಕ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ, ಭಾಷೆ, ಶಿಕ್ಷಣ, ಸಾಹಿತ್ಯ, ವಸತಿ ವೈವಿಧ್ಯತೆ.

ರಾಷ್ಟ್ರೀಯ ಭಾವೈಕ್ಯತೆ ಅಡೆತಡೆಗಳು

ರಾಷ್ಟೀಯ ಭಾವೈಕ್ಯತೆಗೆ ಅಡಚಣೆ ಉಂಟುಮಾಡುವ ಕೆಲವು ಅಂಶಗಳು ಈ ಕೆಳಗಿನಂತಿವೆ;

  • ನೈತಿಕ ಸಂಘರ್ಷಗಳು
  • ಹಾನಿಕರ ಘಟನೆಗಳು
  • ಧಾರ್ಮಿಕ ಸಂಘರ್ಷ
  • ಕೋಮುಗಲಭೆ
  • ಲೈಂಗಿಕ ವಿಚಾರಗಳು
  • ಜಾತಿ ತಾರತಮ್ಯ
  • ಇತ್ಯಾದಿ

ರಾಷ್ಟ್ರೀಯ ಐಕ್ಯತೆ ವೃದ್ಧಿಸುವ ಅಂಶಗಳಾವುವು?

  • ಭೌಗೋಳಿಕ ಏಕತೆ: ಭಾರತವು ಸ್ಥಿರವಾದ ನೈಸರ್ಗಿಕ ಗಡಿ ಹೊಂದಿದೆ. ಇದು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲ ಸಮುದಾಯ, ವರ್ಗದ ಜನರು ಒಟ್ಟಾಗಿ ಬದುಕಲು ಅವಕಾಶ ಕಲ್ಪಿಸಿದೆ. ಸಮುದ್ರ ಮತ್ತು ಹಿಮಾಲಯ ಶ್ರೇಣಿ, ಕಾಡುಗಳಲ್ಲಿ ವಾಸಿಸುವ ಜನರೂ ಸಹ ಏಕತೆಯ ಸಾಕ್ಷಾತ್ಕಾರಕ್ಕೆ ತಲೆಬಾಗುತ್ತಾರೆ.
  • ಧಾರ್ಮಿಕ ಭಾವೈಕ್ಯತೆ: ಭಾರತದಲ್ಲಿ ವಿವಿಧ ಧರ್ಮ, ಜಾತಿ ಮತ್ತು ಸಮುದಾಯದ ಜನರು ಸೌಹಾರ್ದತೆ, ಶಾಂತಿ, ಪ್ರೀತಿ, ಸಹೋದರತೆಯಿಂದ ಬದುಕುವ ಹಾಗೂ ಏಕತೆ ಸಾರುವ ಜೀವನಕ್ರಮ. ಪೂಜಾಸ್ಥಳ, ನಂಬಿಕೆ, ಆಚಾರ, ಪದ್ಧತಿ, ಭಜನೆ, ಕೀರ್ತನೆ, ಪೂಜಾ ವಿಧಿ-ವಿಧಾನ ಎಲ್ಲವೂ ಬೇರೆ ಬೇರೆಯಾಗಿದ್ದರೂ ಕೂಡ ದೇಶಭಕ್ತಿ ಸಾರುವುದಾಗಿದೆ. 
  • ಸಾಂಸ್ಕೃತಿಕ ಭಾವೈಕ್ಯತೆ: ಭಾರತದಲ್ಲಿ ವಿಭಿನ್ನ ಪರಂಪರೆ, ಆಚಾರ-ವಿಚಾರ, ಪದ್ಧತಿ, ಜೀವನಕ್ರಮ, ಸಾಹಿತ್ಯ, ನೃತ್ಯ, ಕಲೆ, ಸಂಗೀತ, ಸಂಪ್ರದಾಯ, ಹಬ್ಬಗಳು, ಕುಟುಂಬ ಇದ್ದರೂ ಸಹ ಏಕತೆ ಸಾಧಿಸಿದೆ.
  •  ಭಾಷಾ ಭಾವೈಕ್ಯತೆ: ಭಾರತದಲ್ಲಿ ಹಲವು ಭಾಷೆಗಳಿವೆ. ಕನ್ನಡ, ತಮಿಳು, ತೆಲುಗು, ಹಿಂದಿ, ಬೆಂಗಾಲಿ, ಅಸ್ಸಾಮಿ ಹೀಗೆ ಸಾಕಷ್ಟು ಭಾಷೆಗಳಿವೆ. ಆದರೆ ದೇಶದ ಮೂಲ ಹಾಗೂ ಎಲ್ಲಾ ಭಾಷೆಗಳಿಗೆ ಸಂಸ್ಕೃತವೇ ಪ್ರಧಾನವಾಗಿದೆ. ದೇಶದ ಹಲವು ಕಾವ್ಯಗಳು, ಇತಿಹಾಸ, ಕೃತಿಗಳು, ಸಾಹಿತ್ಯ, ತತ್ವಶಾಸ್ತ್ರ ಎಲ್ಲವನ್ನು ದಾಖಲಿಸಿದ ಏಕೈಕ ಭಾಷೆ ಸಂಸ್ಕೃತವಾಗಿದೆ. 
  • ರಾಜಕೀಯ ಭಾವೈಕ್ಯತೆ: ಭಾಷೆಯ ಆಧಾರದ ಮೇಲೆ ರಾಜ್ಯಗಳು ಉದಯವಾಯಿತು. ಭಾರತ ಹಲವು ರಾಜ್ಯಗಳಾಗಿ ವಿಭಜನೆ ಹೊಂದಿದ ನಂತರ ಹಲವು ರಾಜಕೀಯ ಪಕ್ಷಗಳು ಉದಯವಾದವು. ಬ್ರಿಟಿಷರ ಆಳ್ವಿಕೆಯ ನಂತರ ರಾಜಕೀಯ ಏಕೀಕರಣದ ಪರಿಕಲ್ಷನೆ ಶುರುವಾಯಿತು.
  • ಜನಾಂಗೀಯ ಏಕತೆ: ಭಾರತದಲ್ಲಿ ಸಾಕಷ್ಟು ಜನಾಂಗದದವರು ವಾಸಿಸುತ್ತಿದ್ದಾರೆ. ವಿವಿಧ ಜನಾಂಗದ ಜನರು ಸ್ಥಳೀಯ ಜನಸಂಖ್ಯೆಯಲ್ಲಿ ಸಂಪೂರ್ಣವಾಗಿ ವಿಲೀನಗೊಂಡರು.
  • ಭಾವನಾತ್ಮಕ ಏಕತೆ: ಭಾರತೀಯರು ಭಾವುಕ ಜೀವಿಗಳು. ಭಾರತೀಯರು ಭಾವನಾತ್ಮಕವಾಗಿ ಪರಸ್ಪರ ಹೊಂದಾಣಿಕೆಯಿಂದ ಬದುಕು ಸಾಗಿಸುತ್ತಿದ್ದಾರೆ. ಕುಟುಂಬ, ಸಂಬಂಧಿಗಳು ಮಾತ್ರವಲ್ಲ, ದೇಶದ ವಿಚಾರದಲ್ಲೂ ಭಾರತೀಯರು ಭಾವನಾತ್ಮಕವಾಗಿ ವಿಚಾರ ಮಾಡುತ್ತಾರೆ. ಯಾರೇ ಸಂಕಷ್ಟದಲ್ಲಿದ್ದರೂ ಮಿಡಿಯುತ್ತಾರೆ. ಸಾವಿಗೆ ಮರುಗುತ್ತಾರೆ. ಸಂದರ್ಭ ಬಂದಾಗ ಸಹಾಯಕ್ಕೆ ನಿಲ್ಲುತ್ತಾರೆ.

ವಿವಿಧತೆಯಲ್ಲಿ ಐಕ್ಯತೆ ಮೂಡಿಸುವ ಅಂಶಗಳು

ಬಣ್ಣ, ಜಾತಿ, ಜನಾಂಗ, ಧರ್ಮ, ಆಚಾರ-ವಿಚಾರ ಇದೆಲ್ಲದರ ವೈವಿಧ್ಯತೆ, ವಿಭಿನ್ನತೆಯಿದ್ದರೂ ಐಕ್ಯತೆ ಇದೆ. 

  • ಸಾಂಸ್ಕೃತಿಕ ಅಂಶ: ಊಟ, ಉಪಚಾರ, ಅತಿಥಿಗಳ ಸೇವೆ, ಸಂಪ್ರದಾಯ, ರೀತಿ-ನೀತಿ, ಭಾಷೆ, ಉಡುಗೆ-ತೊಡುಗೆ, ಸಾಹಿತ್ಯ, ಕಲೆ, ವಾಸ್ತುಶಿಲ್ಪ, ಸಮುದಾಯ ಎಲ್ಲವೂ ವೈವಿಧ್ಯಮಯವಾಗಿದೆ. ಆದರೂ ಕೂಡ ಜನರು ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಎಂಬ ಭಾವನೆಯೊಂದಿಗೆ ವಾಸಿಸುತ್ತಾರೆ. 
  • ಮಾನಸಿಕ ವಿಕಾಸ ಅಂಶ: ಸಂಘ ಸಂಸ್ಥೆ, ಆಂತರಿಕ ಸಮಸ್ಯೆಗಳು, ಕುಟುಂಬ, ಸಮಾಜ, ಸಮುದಾಯದಲ್ಲಿ ನಡೆಯುವ ಘಟನೆಗಳು ಹಾಗೂ ನೈತಿಕ ಮೌಲ್ಯ, ಆದರ್ಶಕ್ಕೆ ಧಕ್ಕೆಯಾಗದಂತೆ ಜನರು ನಡೆದುಕೊಳ್ಳುತ್ತಾರೆ. 
  • ದೈಹಿಕ ಸ್ವರೂಪ ಅಂಶ: ವಿವಿಧ ಕುಲ, ಜಾತಿ, ಜನಾಂಗ, ಧರ್ಮದ ಜನರು, ಕಪ್ಪು-ಬಿಳುಪು ಎಂಬ ವರ್ಣಭೇದವಿಲ್ಲದೆ ಬದುಕುತ್ತಾರೆ. ವಿವಿಧ ಪ್ರದೇಶಗಳಲ್ಲಿ ಹುಟ್ಟಿ ಬೆಳೆಯುವ ಜನರು ದೈಹಿಕ ಆಕಾರ, ಬದುಕುವ ರೀತಿಯಲ್ಲಿ ಭಿನ್ನತೆ ಹೊಂದಿದ್ದರೂ ದೇಶದ ವಿಚಾರದಲ್ಲಿ ಐಕ್ಯತೆ ಪ್ರದರ್ಶಿಸುತ್ತಾರೆ. 
  • ಆರ್ಥಿಕ ಅಂಶ: ಒಂದು ಸಮಾಜ, ಸಮುದಾಯದ ಜನರು ಹಾಗೂ ಕುಟುಂಬಸ್ಥರು ವಿವಿಧ ಕೆಲಸ, ಕಾರ್ಯ ಮಾಡುತ್ತಾರೆ. ಕೆಲವರು ಕೃಷಿ, ಕಂಪನಿ, ಕೂಲಿ ಸರ್ಕಾರಿ ನೌಕರಿ, ಅಧಿಕಾರಿ ಹೀಗೆ ವಿವಿಧ ಕೆಲಸದ ಮೂಲಕ ಹಣ ಸಂಪಾದನೆ ಮಾಡಿ, ಆರ್ಥಿಕ ಅಭಿವೃದ್ಧಿ ಹೊಂದುತ್ತಾರೆ. ಆರ್ಥಿಕ ಅಸಮಾನತೆ ಯಾವುದೇ ಕಾರಣದಿಂದ ದೇಶದ ಭದ್ರತೆ, ಐಕ್ಯತೆ ಮೇಲೆ ಹೊಡೆತ ಬೀಳದಂತೆ ನೋಡಿಕೊಳ್ಳಲಾಗುತ್ತದೆ. 
  • ಭೌಗೋಳಿಕ ಅಂಶ: ಗಡಿ, ಸಂಪನ್ಮೂಲ ವಿಚಾರದಲ್ಲಿ ಐಕ್ಯತೆ ಇದೆ. ದೇಶದ ನೈಸರ್ಗಿಕ ಸಂಪತ್ತಿನ ಮೇಲೆ ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕಿದೆ. ದೇಶದ ಸಂಪನ್ಮೂಲಕ್ಕೆ ಧಕ್ಕೆಯಾಗದಂತೆ, ಬಳಕೆ ಮಾಡುವುದು ಕರ್ತವ್ಯವಾಗಿದೆ. ಪ್ರತಿ ರಾಜ್ಯದ ಸಂಪತ್ತನ್ನು ಕಾಪಾಡುವ ಜವಾಬ್ದಾರಿ ಎಲ್ಲರದ್ದೂ ಆಗಿದೆ.

ರಾಷ್ಟ್ರೀಯ ಭಾವೈಕ್ಯತೆಯ ಮೇಲೆ ಪ್ರಭಾವ ಬೀರುವ ಅಂಶಗಳು 

  • ವರ್ಣಭೇದ ನೀತಿ
  • ಭ್ರಷ್ಟಾಚಾರ
  • ರಾಜಕೀಯ ಪಕ್ಷಗಳು
  • ರಾಜಕೀಯ ಸಿದ್ಧಾಂತ
  • ಸ್ವಜನ ಪಕ್ಷಪಾತ
  • ಧಾರ್ಮಿಕ ಸಂಘರ್ಷ ಅಥವಾ ಕೋಮುಗಲಭೆ
  • ಅಜ್ಞಾನ
  • ಮದುವೆಯ ವಿಚಾರ
  • ಶಿಕ್ಷಣ
  • ಜಾತೀಯತೆ
  • ಆರ್ಥಿಕ ಅಸಮಾನತೆ
  • ಭಾಷಾಭಿಮಾನ
  • ಪ್ರಾದೇಶಿಕತೆ
  • ಸಾಮಾಜಿಕ ಅಸಮಾನತೆ
  • ಲಿಂಗ ಮತ್ತು ಲೈಂಗಿಕ ವಿಚಾರ
  • ಪರಂಪರೆ

ಶಿಕ್ಷಣ ಮತ್ತು ರಾಷ್ಟ್ರೀಯ ಭಾವೈಕ್ಯತೆ 

“ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬ ಮಾತಿದೆ. ಮಗು ಅಂಬೆಗಾಲಿಡುವಾಗ ಅಮ್ಮಾ ಎನ್ನುವುದನ್ನು ಕಲಿಯುತ್ತದೆ. ಮಗು ನಡೆದಾಡಲು ಶುರು ಮಾಡಿದಾಗ, ಕುಟುಂಬದ ಸದಸ್ಯರ ಮಾತು, ವರ್ತನೆಗಳನ್ನು ನೋಡಿ ಅವರಂತೆ ಅನುಕರಣೆ ಮಾಡುತ್ತದೆ. ನಾವು ಮಗುವನ್ನು ಎಂತಹ ವಾತಾವರಣದಲ್ಲಿ ಬೆಳೆಸುತ್ತೇವೆ? ನಾವು ಏನು ಹೇಳಿಕೊಡುತ್ತೇವೆಯೋ ಅದನ್ನೇ ಮಗು ಕಲಿಯುತ್ತದೆ. ಹಾಗಾಗಿ ಮಗುವಿಗೆ ಚಿಕ್ಕ ವಯಸ್ಸಿನಲ್ಲೇ ಒಳ್ಳೆಯ ವಿಷಯ, ಆದರ್ಶ ಮತ್ತು ಮೌಲ್ಯಗಳನ್ನು ತಿಳಿಸಿಕೊಡಬೇಕು. 

  • ಮಗು ಅಂಗನವಾಡಿಗೆ ಹೋಗುತ್ತಿದ್ದಂತೆ, ರಾಷ್ಟ್ರಶಕ್ತಿ, ರಾಷ್ಟ್ರಭಕ್ತಿ, ಭಾವೈಕ್ಯತೆಯ ಪಾಠ ಹೇಳಬೇಕು. 
  • ಕಥೆಯ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ಕಥನವನ್ನು ತಿಳಿಸಿ ಕೊಡಬೇಕು.
  • ಭಗವದ್ಗೀತೆ, ಶ್ಲೋಕ, ಮಹಾ ಕಾವ್ಯಗಳ ಸಾರಾಂಶ ಹೇಳಿ ಜೀವನ ಪಾಠ ಹೇಳಿ ಕೊಡಬೇಕು
  • ಪಠ್ಯ ಪುಸ್ತಕಗಳಲ್ಲಿ ವಿವಿಧತೆಯಲ್ಲಿ ಏಕತೆ ಹಾಗೂ ಭಾವೈಕ್ಯತೆಯ ಕುರಿತ ಪಾಠ ಸೇರಿಸಬೇಕು
  • ಪಠ್ಯ ಹಾಗೂ ಪಠ್ಯೇತರ ಹಾಗೂ ಸಾಂಸ್ಕೃತಿಕ ಚಟುವಟಿಕೆ ಸಮಯದಲ್ಲಿ ವೀರ ಯೋಧರ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಕಥೆ ಹೇಳಬೇಕು
  • ನೃತ್ಯ, ನಾಟಕಗಳ ಮೂಲಕ ವೀರನಾರಿಯರು, ಪ್ರಾಮಾಣಿಕತೆ ಹಾಗೂ ಮೌಲ್ಯಯುತ ಶಿಕ್ಷಣ ನೀಡಲು ಪ್ರಯತ್ನಿಸಬೇಕು
  • ಎಲ್ಲಕ್ಕಿಂತ ದೇಶ ಮೊದಲು ಎಂಬ ದೇಶದ ಬಗ್ಗೆ ಹೆಮ್ಮೆ ಹಾಗೂ ಸ್ವಾತಂತ್ರ್ಯದ ಗಾಥೆಯನ್ನು ತಿಳಿಸಬೇಕು.
  • ಉಚ್ಛ-ನೀಚ, ಮೇಲು-ಕೀಳು ಎಂಬ ಭಾವನೆ ತೊರೆದು, ನಾಡೊಂದೇ, ನಾವೆಲ್ಲ ಒಂದೇ ಎಂಬ ತಾಯ್ನಾಡಿನ ಸಮರ್ಪಣಾ ಭಾವದ ಪಾಠವನ್ನು ಪಠ್ಯಕ್ರಮದಲ್ಲಿ ಮತ್ತು ಶಿಕ್ಷಕರು ಹೇಳಿ ಕೊಡಬೇಕು.
  • ಜಾತೀಯತೆ, ಪ್ರಾಂತೀಯತೆ, ಮತೀಯವಾದ, ಸಂಕುಚಿತ ಮನೋಭಾವನೆ ತೊರೆದು ಬದುಕುವ ಬಗ್ಗೆ ಹೇಳಬೇಕು.
  • ನೈತಿಕತೆ, ಆಧ್ಯಾತ್ಮೀಕತೆ, ರಾಷ್ಟ್ರೀಯತೆ, ರಾಷ್ಟ್ರೋತ್ಥಾನದ ವಿಷಯಗಳು ಶಿಕ್ಷಣದ ಉಸಿರಾಗಬೇಕು. ಸ್ಕೌಟ್, ಗೈಡ್ ಮತ್ತು ಸೇವಾದಳದ ಮೂಲಕ ಚಟುವಟಿಕೆಗಳಲ್ಲಿ ಮಕ್ಕಳನ್ನು ಭಾಗಿಯಾಗಿಸುವುದು. 

ರಾಷ್ಟ್ರೀಯ ಭಾವೈಕ್ಯತೆಯಲ್ಲಿ ಶಿಕ್ಷಣದ ಪಾತ್ರ

ಪ್ರತೀ ಶೈಕ್ಷಣಿಕ ಹಂತದಲ್ಲಿ ರಾಷ್ಟ್ರೀಯತೆ ಹಾಗೂ ಭಾರತೀಯತೆಯನ್ನು ರೂಢಿಸುವ, ಕೆಚ್ಚೆದೆಯಲ್ಲಿ ದೇಶಭಕ್ತಿ ಮೂಡಿಸುವ ಶಿಕ್ಷಣದ ಅವಶ್ಯಕತೆ ಇದೆ. 

  • ರಾಷ್ಟ್ರ ನಿಷ್ಠೆ ರೂಪಿಸಬಲ್ಲ ಶಿಕ್ಷಣ ಪದ್ಧತಿ ಜಾರಿಯಾಗಬೇಕು.
  • “ವಿಶ್ವವೇ ಒಂದು ಕುಟುಂಬ, ನಾವೆಲ್ಲರೂ ಇದರ ಸದಸ್ಯರು” ಎಂಬ ರವೀಂದ್ರನಾಥ ಟ್ಯಾಗೋರರ ವಾಣಿಯಂತೆ ಶಿಕ್ಷಣದಲ್ಲಿ ಭಾವೈಕ್ಯತೆಯ, ಭಾತೃತ್ವ ಸಮಾಜ, ಭೇದಭಾವವಿಲ್ಲದೇ ಬದುಕುವ ಬಗ್ಗೆ ಶಿಕ್ಷಣ ಬೆಳಕು ಚೆಲ್ಲಬೇಕು.
  • ಸಾಮಾನ್ಯ ಜ್ಞಾನ, ಶಾಲೆ, ಕಾಲೇಜು, ಸ್ನಾತಕೋತ್ತರ ಹಂತಗಳಲ್ಲಿ ರಾಷ್ಟ್ರೀಯತೆ, ನೈತಿಕತೆ, ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಜ್ಞಾನ ಮತ್ತು ಕೌಶಲ್ಯ ಬೆಳೆಸಬೇಕು.
  • “ನ ಹೀ ಜ್ಞಾನೇನ ಸದೃಶ್ಯಂ ಪವಿತ್ರ ಮಿಹ ಮಿದ್ಯತೇ”. ಇದರರ್ಥ ಜ್ಞಾನಕ್ಕೆ ಸಮಾನ ಹಾಗೂ ಪವಿತ್ರವಾದದ್ದು ಈ ಜಗತ್ತಿನಲ್ಲಿ ಬೇರೊಂದಿಲ್ಲ ಎಂದಾಗಿದೆ. ಹಾಗಾಗಿ ಶಿಕ್ಷಣದಲ್ಲಿ ಭಾವೈಕ್ಯತೆ ಸಾರುವ ಹಲವು ಸಂಗತಿಗಳನ್ನು ಹೇಳಿ ಕೊಡಬೇಕು.
  • ಕೇವಲ ಉದ್ಯೋಗ ಪಡೆಯುವುದು ಮಾತ್ರವಲ್ಲ, ಕಲಿಕೆಯಲ್ಲಿ ತ್ಯಾಗ, ಬಲಿದಾನ, ಸಾಮಾಜಿಕ ಅವ್ಯವಸ್ಥೆ, ಹೋರಾಟ, ಸಂಕಷ್ಟಕ್ಕೆ ಸ್ಪಂದಿಸುವ ಮೌಲ್ಯಗಳ ಬಗ್ಗೆ ಹೇಳಿ ಕೊಡಬೇಕು.
  • ಬದಲಾಗುತ್ತಿರುವ ಸನ್ನಿವೇಶದಲ್ಲಿ ರಾಷ್ಟ್ರದ ಭದ್ರತೆ, ಆಂತರಿಕ ಮತ್ತು ಬಾಹ್ಯ ಸಂಘರ್ಷಗಳಿಂದ ದೇಶವನ್ನು ಕಾಪಾಡುವ ಬಗ್ಗೆ ಶಿಕ್ಷಣದಲ್ಲಿ ಪಠ್ಯ ಇಡಬೇಕು.
  • ಸ್ವಾತಂತ್ರ್ಯ ಹೋರಾಟಗಾರರು, ಮಹಾನ್ ಕವಿಗಳು, ಸಾಹಿತಿಗಳು, ವಿಮರ್ಶೆಕಾರರು, ಯೋಧರ ಯಶೋಗಾಥೆ, ಕೃತಿ, ಪುಸ್ತಕ, ನೈಜ ಸನ್ನಿವೇಶಗಳ ಬಗ್ಗೆ ಶಿಕ್ಷಣ ತಿಳಿಸಬೇಕು.
  • ರಾಷ್ಟ್ರೀಯತೆಗೆ ಧಕ್ಕೆ ತರುವ ಚಟುವಟಿಕೆಗಳ ವಿರುದ್ಧ ಹೋರಾಟ ಮಾಡುವ ಬಗ್ಗೆ ಶಿಕ್ಷಣ ಜಾಗೃತಿ ಮೂಡಿಸಬೇಕು.
  • ದೇಶದ ವಿವಿಧ ಸಂಸ್ಕೃತಿ ಹಾಗೂ ಅಂತಾರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ತಿಳಿಸಬೇಕು.
  • ಶಿಕ್ಷಕ ವೃಂದ ದಿನವೂ ಕಲಿಕಾ ಚಟುವಟಿಕೆ ಮತ್ತು ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಆದ್ಯತೆ ನೀಡಬೇಕು. ರಾಷ್ಟ್ರೀಯವಾದ ಮತ್ತು ಸಾಹಿತ್ಯ ವಿಚಾರಧಾರೆಯ ಬಗ್ಗೆ ಹೇಳಬೇಕು.
  • ಮಗುವಿಗೆ ಬೌದ್ಧಿಕ ಮತ್ತು ಮಾನಸಿಕ ಸಂಸ್ಕಾರ ನೀಡುವ ಮಾನವೀಯ ಪ್ರಯತ್ನವೇ ಶಿಕ್ಷಣ ಆಗಿದೆ. ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿ ಆ ದೇಶದ ಶಿಕ್ಷಣದ ಗುಣಮಟ್ಟ, ಸುಶಿಕ್ಷಿತರ ಪ್ರಮಾಣವನ್ನು ಅವಲಂಬಿಸಿದೆ.

ರಾಷ್ಟ್ರೀಯ ಭಾವೈಕ್ಯತೆ ದಿನಾಚರಣೆ 

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಕ್ಟೋಬರ್ 31, 2014 ರಂದು “ರಾಷ್ಟ್ರೀಯ ಏಕತೆ ದಿನಾಚರಣೆ ಅಂದರೆ ರಾಷ್ಟ್ರೀಯ ಭಾವೈಕ್ಯತೆ ದಿನಾಚಣೆ” ಆಚರಣೆಗೆ ಕರೆ ಕೊಟ್ಟರು. ಭಾರತದ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾಗೂ ಭಾರತ ಗಣರಾಜ್ಯ ಸಂಸ್ಥಾಪಕ ನಾಯಕರಲ್ಲಿ ಒಬ್ಬರಾದ ಸ್ವಾತಂತ್ರ್ಯ ಹೋರಾಟಗಾರ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಹುಟ್ಟು ಹಬ್ಬದ ವಾರ್ಷಿಕ ಸ್ಮರಣಾರ್ಥವಾಗಿ ರಾಷ್ಟ್ರೀಯ ಏಕತೆ ದಿನಾಚರಣೆ ಆಚರಿಸಲಾಗುತ್ತದೆ.

ಐರನ್ ಮ್ಯಾನ್ ಆಫ್ ಇಂಡಿಯಾ ಸರ್ದಾರ್ ವಲ್ಲಭಭಾಯಿ ಪಟೇಲರು, 1947 ರಿಂದ 1949ರಲ್ಲಿ ಸ್ವಾತಂತ್ರ್ಯ ಕಾಯಿದೆ ಅಡಿ ದೇಶವನ್ನು ಏಕೀಕರಣಗೊಳಿಸಿದರು. ಹೀಗಾಗಿ ಅವರನ್ನು ‘ಬಿಸ್ಮಾರ್ಕ್ ಆಫ್ ಇಂಡಿಯಾ’ ಎಂದು ಕರೆಯುತ್ತಾರೆ.

ರಾಷ್ಟ್ರೀಯ ಭಾವೈಕ್ಯತೆ ದಿನಾಚರಣೆ ಮೂಲಕ, ಮತ ಭೇದ, ಜಾತಿ, ಧರ್ಮ ಕಲಹ ತೊಡೆದು ಹಾಕುವುದು, ದೇಶದ ಭದ್ರತಾ ಸಮಸ್ಯೆ ನಿವಾರಣೆ, ದೇಶದ ಹಿತಾಸಕ್ತಿ ಹಾಗೂ ಸಮಾಜದ ಉನ್ನತಿಯ ವಿಚಾರಕ್ಕೆ ಅನುವು ಮಾಡಿ ಕೊಡುವುದು, ವಿವಿಧತೆಯಲ್ಲಿ ಏಕತೆಯ ಮಂತ್ರ ಹಾಗೂ ಮನಸ್ಸುಗಳನ್ನುಗಟ್ಟಿಗೊಳಿಸಲು ಸಹಕಾರಿ ಆಗಿದೆ. ಹೀಗಾಗಿ “ರನ್ ಫಾರ್ ಯೂನಿಟಿ” ಎಂದು ಇದನ್ನು ಕರೆಯಲಾಗಿದೆ. 

 ರಾಷ್ಟ್ರೀಯ ಭಾವೈಕ್ಯತೆಯನ್ನು ಬಲಪಡಿಸುವ ಕ್ರಮಗಳು

  • ರಾಷ್ಟ್ರೀಯ ಭಾವೈಕ್ಯತೆ ಜನರ ಭಾವನೆಗಳ ಮೇಲೆ ಅವಲಂಬಿಸಿದೆ. ಹಾಗಾಗಿ ರಾಷ್ಟ್ರೀಯತೆಯ ಬಗ್ಗೆ ಸರಿಯಾದ ಕ್ರಮದಲ್ಲಿ ಜಾಗ್ರತಿ ಮೂಡಿಸಬೇಕು.
  • ರಾಷ್ಟ್ರೀಯ ಭಾವನೆಯ ಜೊತೆಗೆ ಭಾಷೆ, ಉಪಭಾಷೆ, ಸಂಸ್ಕೃತಿಯ ಜೊತೆಗೆ ಜನರನ್ನು ಒಂದೆಡೆ ಬೆಸೆಯುವ ಪ್ರಯತ್ನವಾಗಬೇಕು.
  • ರಾಷ್ಟ್ರದ ಏಕತೆ ಒಡೆಯುವ ಕೆಟ್ಟ ಶಕ್ತಿಗಳು, ಆಲೋಚನೆ, ವಿಚಾರಧಾರೆಗಳನ್ನು ಮಟ್ಟ ಹಾಕುವ ಕಠಿಣ ನಿಯಮ ಜಾರಿಯಾಗಬೇಕು.
  • ರಾಷ್ಟ್ರದ ಭದ್ರತೆಗೆ ಹಾಗೂ ಸಾಮಾಜಿಕ, ಭೌಗೋಳಿಕ ಹಾಗೂ ಆರ್ಥಿಕ ಸಮಸ್ಯೆಗೆ ಧಕ್ಕೆ ತರುವ ಚಟುವಟಿಕೆಗಳನ್ನು ನಿಯಂತ್ರಿಸಬೇಕು.
  • ಪ್ರತೀ ಹಂತದಲ್ಲೂ ರಾಷ್ಟ್ರೀಯತೆಗೆ ಧಕ್ಕೆಯಾಗದಂತೆ ಸರ್ಕಾರ ಮತ್ತು ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. 
  • ರಾಷ್ಟ್ರದ ವಿವಿಧತೆ ಮತ್ತು ಏಕತೆಯ ಬಗ್ಗೆ ಜನರಲ್ಲಿ, ಮಕ್ಕಳಲ್ಲಿ ಹೆಚ್ಚು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಬೇಕು. 
  • ಜಾತಿ, ಧರ್ಮದ ಆಧಾರದ ಮೇಲೆ, ಭ್ರಷ್ಟಾಚಾರ, ಮತೀಯತೆ ಮೂಲಕ ಜನರನ್ನು ಉದ್ವಿಗ್ನಗೊಳಿಸುವವರನ್ನು ಮಟ್ಟ ಹಾಕಬೇಕು.
  • ಪ್ರಜಾಪ್ರಭುತ್ವ, ಆರ್ಥಿಕ ಅಭಿವೃದ್ಧಿ, ಶಿಕ್ಷಣ ಮತ್ತು ದೇಶದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ದುಡಿಯುವಂತೆ ಮಾಡಬೇಕು.

ಉಪಸಂಹಾರ

ರಾಷ್ಟ್ರ ಮತ್ತು ಅದರ ಏಳಿಗೆಯಾಗಬೇಕಾದರೆ ಅಲ್ಲಿನ ಜನರ ಒಗ್ಗಟ್ಟು ಅತ್ಯಗತ್ಯ. ನಮ್ಮ ದೇಶ, ನಮ್ಮ ನಾಡು, ನಮ್ಮ ನುಡಿ ಎಂಬ ಅಭಿಮಾನ ಮತ್ತು ಹೆಮ್ಮೆ ಮೂಡಬೇಕು.

ಜನರು ತಮ್ಮ ಕರ್ತವ್ಯ ಪ್ರಜ್ಞೆಯೊಂದಿಗೆ ಮಕ್ಕಳಾದಿಯಾಗಿ ಅರಿವು ನೀಡುವ ಕೆಲಸ ಮಾಡಬೇಕು. ಕೆಟ್ಟ ಚಟುವಟಿಕೆಗಳತ್ತ ಆಕರ್ಷಿತರಾಗದೇ ದೇಶದ ಭವಿಷ್ಯಕ್ಕಾಗಿ, ನಾಡಿನ ಉಳಿವಿಗೆ ಸರ್ವಸ್ವವನ್ನು ತ್ಯಾಗ ಮಾಡಲು ಸಿದ್ಧರಾಗಬೇಕು. 

ಒಟ್ಟಿನಲ್ಲಿ ಭಾರತ ಅನಾದಿ ಕಾಲದಿಂದಲೂ ಸಾವಿರಾರು ಸಂಸ್ಕೃತಿಗಳನ್ನು ಪೋಷಿಸುತ್ತಾ ಬಂದಿದೆ. ಇಲ್ಲಿನ ಮಕ್ಕಳು ಪರಸ್ಪರ ಹೃದಯ ಶ್ರೀಮಂತಿಕೆ, ನಾವೆಲ್ಲಾ ಒಂದು ಎಂಬ ಭಾವನೆಯೊಂದಿಗೆ ಬದುಕು ಕಟ್ಟಿಕೊಳ್ಳುತ್ತಾ ಬಂದಿದ್ದಾರೆ. ಹಾಗಾಗಿ ವೈವಿಧ್ಯತೆಯಲ್ಲೂ ಏಕತೆಯನ್ನು ಕಂಡುಕೊಂಡಿದ್ದಾರೆ. 

FAQ’s On ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ

Q1. ರಾಷ್ಟ್ರೀಯ ಭಾವೈಕ್ಯತೆ ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ತದೆ?

ಉತ್ತರ: ಅಕ್ಟೋಬರ್ ೩೧ ರಂದು ರಾಷ್ಟೀಯ ಐಕ್ಯತಾ ದಿನವನ್ನು ಆಚರಿಸಲಾಗುತ್ತದೆ.

Q2. ಭಾವೈಕ್ಯತೆ ಎಂದರೇನು?

ಉತ್ತರ: ಸರಳವಾಗಿ ಹೇಳುವುದಾದರೆ ವಿವಿಧತೆಯಲ್ಲೂ ಏಕತೆಯನ್ನು ಕಾಣುವುದೇ ಭಾವೈಕ್ಯತೆ.

Q3. ರಾಷ್ಟ್ರೀಯ ಭಾವೈಕ್ಯತೆ ಎಂದರೇನು? 

ಉತ್ತರ: ವಿಭಿನ್ನ ಧಾರ್ಮ, ಸಂಸ್ಕೃತಿ, ಪರಂಪರೆ ಹೊಂದಿರುವ ಜನರು ದೇಶದ ಭದ್ರತೆ ಮತ್ತು ರಾಷ್ಟ್ರದ ಹಿತಾಸಕ್ತಿಗಾಗಿ ಒಗ್ಗಟ್ಟಾಗಿ ಹೋರಾಡುವುದು ಹಾಗೂ ಭೇದಭಾವವಿಲ್ಲದೇ ಜೀವನ ನಡೆಸುವುದನ್ನೇ ರಾಷ್ಟ್ರೀಯ ಭಾವೈಕ್ಯತೆ ಎನ್ನಬಹುದು.

ಈ “ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ” ಎಂಬ ಲೇಖನದ ಕುರಿತು ನಿಮ್ಮ ಸಲಹೆ ಸೂಚನೆಗಳು ಏನಾದರೂ ಇದ್ದರೆ ದಯವಿಟ್ಟು ಈ ಕೆಳಗಿನ ಬಾಕ್ಸ್ ನಲ್ಲಿ COMMENT ಮಾಡಿ.

ಈ ಕೆಳಗಿನ ಲೇಖನಗಳನ್ನೂ ಓದಿ.

  1. ಆನ್ಲೈನ್ ಶಿಕ್ಷಣ ಪ್ರಬಂಧ
  2. ದೂರದರ್ಶನ ಪ್ರಬಂಧ
  3. ಯೋಗ ಪ್ರಬಂಧ

2 thoughts on “ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ | Rashtriya Bhavaikyate Prabandha In Kannada”

Leave a Comment