Television Essay In Kannada | ದೂರದರ್ಶನ ಪ್ರಬಂಧ

Television Essay In Kannada (ದೂರದರ್ಶನ ಪ್ರಬಂಧ, ಟಿವಿ ಎಂದರೇನು, ಇತಿಹಾಸ, ಆಗಮನ, ಕಂಡುಹಿಡಿದವರು, ಮಹತ್ವ, ಮಕ್ಕಳ ಮೇಲೆ ಪರಿಣಾಮ, ಅನುಕೂಲಗಳು ಹಾಗೂ ದುಷ್ಪರಿಣಾಮಗಳು)

ದೈನಂದಿನ ಜೀವನದಲ್ಲಿ ಹಾಸು ಹೊಕ್ಕಾಗಿರುವ ಟಿವಿಯ ಬಗ್ಗೆ ನಿಮಗೆಷ್ಟು ಗೊತ್ತು? 

ಪೀಠಿಕೆ: 

ಆಗೆಲ್ಲಾ ಟಿವಿಯಲ್ಲಿ ವ್ಯಕ್ತಿಯೊಬ್ಬ ಕಾಣಿಸಿಕೊಳ್ಳುವುದೆಂದರೆ ಗಂಗೆಯಲ್ಲಿ ಮಿಂದಷ್ಟೇ ಪುಣ್ಯ ಎಂದುಕೊಳ್ಳಲಾಗುತ್ತಿತ್ತು. ದೂರದರ್ಶನ ಆರಂಭವಾದ ದಿನಗಳಲ್ಲಿ ಇದು ಕೇವಲ ಉಳ್ಳವರ ಸ್ವತ್ತಾಗಿತ್ತು. ಬಡವರಿಗೆ ನಿಲುಕದ ನಕ್ಷತ್ರವಾಗಿತ್ತು.

ಊರಲ್ಲಿ ಕಪ್ಪು-ಬಿಳುಪಿನ ಕೇವಲ ಒಂದೇ ಟಿವಿ ಇದ್ದಿದ್ದ ದಿನಮಾನಗಳಲ್ಲಿ ಯಾರ ಮನೆಯಲ್ಲಿ ಟಿವಿ ಇರುತ್ತಿತ್ತೋ ಅವನೇ ಶ್ರೀಮಂತನಾಗಿರುತ್ತಿದ್ದ. ಜಮೀನ್ದಾರರ ಮನೆಗಳಲ್ಲಿ ಟಿವಿ ನೋಡಲು ಇಡೀ ಊರಿಗೆ ಊರೇ ಹೋಗುತ್ತಿದ್ದ ಉದಾಹರಣೆಗಳೂ ಇವೆ.

ಹಂತ ಹಂತವಾಗಿ ಜನಮಾನಸದಲ್ಲಿ ಬೆರೆತು, ಅಚ್ಚಳಿಯದ ನೆನಪುಗಳನ್ನು ಕಟ್ಟಿಕೊಟ್ಟ ಶ್ರವ್ಯ ಹಾಗೂ ದೃಶ್ಯ ಮಾಧ್ಯಮ ದೂರದರ್ಶನ ಭಾರತದಲ್ಲಿ ಹೇಗೆ ಬೆಳೆದು ಬಂತು? ಪ್ರಸಾರ ಆಗಿದ್ದು ಯಾವಾಗ? ವಿಶ್ವದಲ್ಲಿ ದೂರದರ್ಶನ ಪ್ರಾರಂಭವಾಗಿದ್ದ ದಿನ ಯಾವುದು? ಇವೆಲ್ಲಾ ಅಂಶಗಳನ್ನ ಈ ಕೆಳಗೆ ವಿಸ್ತಾರ ರೂಪದಲ್ಲಿ ನೋಡೋಣ.

ವ್ಯಕ್ತಿಗೆ ದೈಹಿಕ ಮತ್ತು ಮಾನಸಿಕ ವಿಶ್ರಾಂತಿ ಬೇಕೇ ಬೇಕು. ವಿಶ್ರಾಂತಿ, ನೆಮ್ಮದಿ ಇಲ್ಲದಿದ್ದರೆ ಆರೋಗ್ಯ ಹದಗೆಡುತ್ತದೆ. ತನಗೆ ಬೇಕಾದ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗದೇ ಮನುಷ್ಯ ಪರದಾಡುತ್ತಾನೆ. ವಿಶ್ರಾಂತಿ, ಸುಸ್ತು, ಆಯಾಸವನ್ನು ಹೋಗಲಾಡಿಸಿ, ಸಕ್ರಿಯನಾಗಿ ಮತ್ತೆ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕಾದರೆ ಮನರಂಜನೆ ಅವಶ್ಯಕವಾಗಿದೆ.

ಒತ್ತಡವನ್ನು ಕಡಿಮೆಗೊಳಿಸಿ ಲವಲವಿಕೆ, ಆಹ್ಲಾದಕರ ಮನಸ್ಸು, ವಾತಾವರಣ ನಿರ್ಮಾಣವಾಗಲು ನಮ್ಮ ಹವ್ಯಾಸಗಳು ಮತ್ತು ಮನರಂಜನಾ ಚಟುವಟಿಕೆಗಳಲ್ಲಿ ನಾವು ಭಾಗಿಯಾಗುವುದು ಅಥವಾ ವೀಕ್ಷಿಸುವುದು, ಅನುಭವಿಸುವುದು ಉತ್ತಮ ಆರೋಗ್ಯವನ್ನು ಒದಗಿಸಲು ಸಹಾಯ ಮಾಡುತ್ತದೆ.

Television Essay In Kannada language
Television Essay In Kannada

ಇಂತಹ ಮನರಂಜನೆಯನ್ನು ದೂರದರ್ಶನ ನೀಡತೊಡಗಿತು. ದಿನವಿಡೀ ದುಡಿದು ಬಂದ ವ್ಯಕ್ತಿ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಲು, ಮನರಂಜನೆಯ ಕಾರ್ಯಕ್ರಮಗಳ ವೀಕ್ಷಣೆಗೆ ಮೊರೆ ಹೋಗತೊಡಗಿದ. 


ವಿಷಯ ಬೆಳವಣಿಗೆ

Television Essay In Kannada Language

ಟಿವಿ ಎಂದರೇನು?

ಟಿವಿ ಎಂದರೆ ಇದೊಂದು ಎಲೆಕ್ಟ್ರಾನಿಕ್ ಸಾಧನವಾಗಿದ್ದು ವೈರಲೆಸ್ ಚಾನೆಲ್ ಗಳ ಬಳಕೆ ಮಾಡಿಕೊಂಡು ಧ್ವನಿಯ ಜತೆಗೆ ಚಿತ್ರವನ್ನು ಸ್ವೀಕರಿಸಲು ಮತ್ತು ಪ್ರದರ್ಶಿಸಲು ಅಗತ್ಯವಾದ ಪೆಟ್ಟಿಗೆಯಾಗಿದೆ. ದೂರದಲ್ಲಿ ನಡೆಯುತ್ತಿರುವ ವಿಷಯವನ್ನು ಎಲೆಕ್ಟ್ರಾನಿಕ್ ಸಾಧನದ ಪರದೆಯ ಮೇಲೆ ದೃಶ್ಯವನ್ನು ನೋಡುವುದೇ ಟಿವಿ ಆಗಿದೆ. 

ದೂರದರ್ಶನದ ಇತಿಹಾಸ

ಟೆಲಿವಿಷನ್ ಕಂಡು ಹಿಡಿದವರು ಯಾರು?

ದೂರದರ್ಶನವನ್ನು ಮೊದಲು ಕಂಡು ಹಿಡಿದದ್ದು ಯಾರು ಎಂದು ನೋಡಿದಾಗ ಹಲವು ದೂರದರ್ಶನ ಕಂಡು ಹಿಡಿಯಲು 19ನೇ ಶತಮಾನದ ಉತ್ತರಾರ್ಧದಲ್ಲಿ 1920ರ ದಶಕದಲ್ಲಿ ಅಮೆರಿಕ, ರಷ್ಯಾ, ಬ್ರಿಟನ್, ಜರ್ಮನಿ ದೇಶಗಳ ಸಂಶೋಧಕರು ದೂರದರ್ಶನ ನಿರ್ಮಾಣಕ್ಕೆ ಪ್ರಯತ್ನಿಸಿ, ಪ್ರದರ್ಶನವನ್ನೂ ಮಾಡಿದ್ದರು.

ಇನ್ನು ದೂರದರ್ಶನ ಕಂಡು ಹಿಡಿದ ಖ್ಯಾತಿ ಸ್ಕಾಟಿಷ್ ಎಂಜಿನಿಯರ್ ಜಾನ್ ಲೋಗಿ ಬೇರ್ಡ್ ಗೆ ಸಲ್ಲುತ್ತದೆ. ಬೇರ್ಡ್ ವಿಶ್ವದ ಮೊದಲ ಯಾಂತ್ರಿಕ ದೂರದರ್ಶನ ಮತ್ತು ಬಣ್ಣದ ದೂರದರ್ಶನ ಕಂಡು ಹಿಡಿದು ಪ್ರದರ್ಶನ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ.  

ವಿಶ್ವದಲ್ಲಿ ದೂರದರ್ಶನದ ಉಗಮ

ದೃಶ್ಯ ಮತ್ತು ಧ್ವನಿಯನ್ನು ಜಂಟಿಯಾಗಿ ಪ್ರಸಾರ ಮಾಡುವ ದೂರದರ್ಶನವೆಂಬ ಮಾಯಾಪೆಟ್ಟಿಗೆಯು ಇಪ್ಪತ್ತನೆಯ ಶತಮಾನದಲ್ಲಿ ಆವಿಷ್ಕಾರಗೊಂಡಿತು. ರೇಡಿಯೋಗಿಂತ ಭಿನ್ನವಾಗಿ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯೊಂದಿಗೆ ದೂರದರ್ಶನ ಆವಿಷ್ಕಾರಗೊಂಡಿತು.

1920ರ ದಶಕದಲ್ಲಿ ದೂರದರ್ಶನ ಆವಿಷ್ಕಾರದ ಪ್ರಯತ್ನ ಹಂತ ಹಂತವಾಗಿ ಆರಂಭವಾಯಿತು. 1924ರಲ್ಲಿ ಸ್ಕಾಟ್ಲೆಂಡಿನ ತಂತ್ರಜ್ಞಾನಿ ಜಾನ್ ಲೋಗಿ ಬೇರ್ಡ್, ಶಬ್ದಗಳನ್ನು ಕೊಂಡೊಯ್ಯುವ ರೇಡಿಯೋ ಮೂಲಕ ಚಿತ್ರಗಳನ್ನು ಕಳುಹಿಸುವ ಸಾಧ್ಯತೆಗಳ ಕುರಿತು ಪ್ರಯೋಗಗಳನ್ನು ನಡೆಸಲು ಶುರುಮಾಡಿದ.

ತಿರುಗುವ ತೂತುಗಳಿರುವ ತಟ್ಟೆಯನ್ನು ಪ್ರಯೋಗಕ್ಕೆ ಬಳಸಿ, ಇದರಲ್ಲಿ ಚಿತ್ರವನ್ನು ದಾಖಲಿಸಿ ಪ್ರಸಾರ ಮಾಡಲು ಸಾಧ್ಯ ಎಂಬುದು ಗೊತ್ತಾದಾಗ 1925ರಲ್ಲಿ ಟೆಲಿವಿಷನ್ ಲಿಮಿಟೆಡ್ ಸಂಸ್ಥೆಯನ್ನು ಸ್ಥಾಪನೆ ಮಾಡಿದ. ಬೇರ್ಡ್ ನ ತಂತ್ರಜ್ಞಾನವನ್ನು ಒಪ್ಪಿಕೊಂಡ ಬಿಬಿಸಿ, 1926ರಲ್ಲಿ ದೂರದರ್ಶನ ಪ್ರಸಾರ ಮಾಡಲು ಮುಂದಾಯಿತು.

ಇದು ಮೊಟ್ಟ ಮೊದಲ ತಂತಿ ರಹಿತ ದೂರದರ್ಶನ ಪ್ರಸಾರ ವ್ಯವಸ್ಥೆ ಆಗಿತ್ತು. 1929ರಲ್ಲಿ ಲಂಡನ್ನಿನಿಂದ ನ್ಯೂಯಾರ್ಕ್ ವರೆಗೆ ಪ್ರಥಮ ದೂರದರ್ಶನ ಪ್ರಸಾರ ಮಾಡಲಾಯಿತು. 

ಇನ್ನು 1923ಕ್ಕಿಂತ ಮೊದಲೇ ಡಾ.ವ್ಲಾಡಿಮಿರ್ ಜ್ವೋರಿಕಿನ್ ಎಂಬ ವಿಜ್ಞಾನಿ ಐಕನೋಸ್ಕೋಪ್ ಎಂಬ ವಿದ್ಯುತ್ ಟೆಲಿವಿಷನ್ ಟ್ಯೂಬ್ ಕಂಡು ಹಿಡಿದಿದ್ದ. ಇದು ಟೆಲಿವಿಷನ್ ಸೆಟ್ ಅಥವಾ ದೂರದರ್ಶನ ಪೆಟ್ಟಿಗೆಯ ತಯಾರಿಕೆಯ ಹಾದಿ ಸುಗಮವಾಯಿತು.

1925ರಲ್ಲಿ ಅಮೆರಿಕದಲ್ಲಿ ಜೆನ್ ಕಿನ್ಸ್ ನಿಸ್ ಎಂಬಾತ ದೂರದರ್ಶನ ಪೆಟ್ಟಿಗೆಗಳ ತಯಾರಿಕೆಗೆ ಅಡಿಪಾಯ ಹಾಕಿದ. ನಂತರ 1936ರಲ್ಲಿ ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಷನ್ ಸಾರ್ವಜನಿಕವಾಗಿ ದೂರದರ್ಶನ ಪ್ರಸಾರ ಆರಂಭ ಮಾಡಿತು. ಮುಂದೆ ಎರಡನೇ ಮಹಾಯುದ್ಧ, ನಾಜಿ ಪಕ್ಷದ ಸಮ್ಮೇಳನಗಳು, 1936ರ ಬರ್ಲಿನ್ ಒಲಿಂಪಿಕ್ ಪಂದ್ಯಗಳ ಪ್ರಸಾರ ಮಾಡಲಾಯಿತು.

1944ರಲ್ಲಿ ಬಿಬಿಸಿ ತನ್ನ ಎರಡನೇ ಚಾನೆಲ್ ನ್ನು ಆರಂಭಿಸಿತು. 1938ರಲ್ಲಿ ಬಣ್ಣದ ಟೆಲಿವಿಷನ್ ಗಳು ಬಂದವು. ಹೀಗೆ ವಿಶ್ವದಲ್ಲಿ ಆರಂಭವಾದ ದೂರದರ್ಶನ ಸಂಸ್ಕೃತಿ ಮುಂದೆ ಎಲ್ಲ ರಾಷ್ಟ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಈಗ ಸಾಕಷ್ಟು ಟಿವಿ ಚಾನಲ್ ಗಳ ಉಗಮಕ್ಕೆ ಹಾದಿ ಮಾಡಿ ಕೊಟ್ಟಿದೆ.

ಭಾರತದಲ್ಲಿ ದೂರದರ್ಶನದ ಉಗಮ

ಅದಾಗ್ಯೂ ಭಾರತದಲ್ಲಿ ದೂರದರ್ಶನದ ಭಾಗ್ಯ ದೊರೆತಿದ್ದು ಸ್ವಾತಂತ್ರ್ಯನಂತರದ ದಿನಗಳಲ್ಲಿ. ದೇಶದಲ್ಲಿ ಶ್ರವ್ಯ-ದೃಶ್ಯ ಮಾಧ್ಯಮವಾದ ದೂರದರ್ಶನ ಆರಂಭವಾದ ಸುವರ್ಣ ಗಳಿಗೆ 1959. ನವದೆಹಲಿಯಲ್ಲಿ ಪ್ರಥಮ ದೂರದರ್ಶನ ಕೇಂದ್ರದ ಸ್ಥಾಪನೆಯಾಯಿತು.

ಆಕಾಶವಾಣಿ ಭವನದ ಒಂದು ಚಿಕ್ಕ ಸ್ಟುಡಿಯೋದಲ್ಲಿ ಡಾ. ರಾಜೇಂದ್ರ ಪ್ರಸಾದ್ ಅವರು ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿದ್ದರು. ದೂರದರ್ಶನದ ಮೊದಲ ನಿರ್ದೇಶಕರು ಶೈಲೇಂದ್ರ ಶಂಕರ್ ಆಗಿದ್ದರು. ಡಿಡಿ ಐ ಲೋಗೊವನ್ನು 1970ರ ದಶಕದ ಆರಂಭದಲ್ಲಿ ಎನ್ ಐ ಡಿಯ ಹಳೆಯ ವಿದ್ಯಾರ್ಥಿ ದೇವಶಿಶ್​ ಭಟ್ಟಾಚಾರ್ಯ ವಿನ್ಯಾಸಗೊಳಿಸಿದರು. ಪ್ರಧಾನಿ ಇಂದಿರಾ ಗಾಂಧಿ ಅವರು ಈ ವಿನ್ಯಾಸವನ್ನು ಒಪ್ಪಿಕೊಂಡರು.

ಇನ್ನು ಪ್ರತಿಮಾ ಪುರಿ 1965ರಲ್ಲಿ ಡಿಡಿ ಐದು-ನಿಮಿಷದ ಬುಲೆಟಿನ್ ಪ್ರಾರಂಭಿಸಿದಾಗ, ಭಾರತದ ಮೊದಲ ಸುದ್ದಿ ಓದುಗರಾದರು. ಮೊಟ್ಟ ನಟ ಶಾರೂಖ್ ಖಾನ್ ಅಭಿನಯದ ಮೊದಲು ಟಿವಿ ಸರಣಿ ಫೌಜಿ 1989ರಲ್ಲಿ ಡಿಡಿ ನ್ಯಾಷನಲ್‌ ನಲ್ಲಿ ಪ್ರಸಾರವಾಯಿತು. ಡಿಡಿ ಸಿಗ್ನೇಚರ್ ರಾಗವನ್ನು 1976ರಲ್ಲಿ ಪಂಡಿತ್ ರವಿಶಂಕರ್ ಮತ್ತು ಉಸ್ತಾದ್ ಅಲಿ ಅಹ್ಮದ್ ಹುಸೇನ್ ಖಾನ್ ಸಂಯೋಜಿಸಿದ್ದರು. 

ಟೆರೆಸ್ಟ್ರೀಯಲ್ ದೂರದರ್ಶನವು ಸಣ್ಣ ಟ್ರಾನ್ಸ್ ಮೀಟರ್ ಮತ್ತು ತಾತ್ಕಾಲಿಕ ಸ್ಟುಡಿಯೋ ಮೂಲಕ ಪ್ರಾಯೋಗಿಕ ಪ್ರಸಾರವನ್ನು ಆರಂಭಿಸಿತು. ದೂರದರ್ಶನ ಪ್ರಥಮ ಪ್ರಸಾರ ವ್ಯಾಪ್ತಿ 40 ಕಿ.ಮೀ ಇತ್ತು. ಮೊದ ಮೊದಲು 20 ನಿಮಿಷಗಳ ಕಾರ್ಯಕ್ರಮವನ್ನು ವಾರದಲ್ಲಿ ಎರಡು ಬಾರಿ ಪ್ರಸಾರ ಮಾಡಲಾಗುತ್ತಿತ್ತು. ಈ ಕಾರ್ಯಕ್ರಮವನ್ನು ಯುನೆಸ್ಕೋ ನೀಡಿದ್ದ ದೂರದರ್ಶನ ಪೆಟ್ಟಿಗೆ ಹೊಂದಿದ್ದ ಟೆಲಿಕ್ಲಬ್ ಸದಸ್ಯರೇ ವೀಕ್ಷಣೆ ಮಾಡುತ್ತಿದ್ದರು.

ಶೈಕ್ಷಣಿಕ ಕ್ಷೇತ್ರದ ಹಿನ್ನೆಲೆ ಮತ್ತು ಕೈಗಾರಿಕಾ ವಲಯಗಳಲ್ಲಿ ಭಾರತೀಯರ ಒಲವು ಹೆಚ್ಚುತ್ತಿದ್ದ ಕಾರಣ ಕೇಂದ್ರ ಸರ್ಕಾರ ದೂರದರ್ಶನ ಸೆಟ್ ಗಳನ್ನು ತೆಗೆದುಕೊಳ್ಳಲು ಫಿಲಿಪ್ಸ್ ನೀಡಿದ್ದ ಸಲಹೆಗೆ ಒಪ್ಪಿಗೆ ನೀಡಿತ್ತು. ಇನ್ನು ಸಮುದಾಯ ಕೇಂದ್ರಗಳಿಗೆಂದೇ ದೂರದರ್ಶನ ಸೆಟ್ ಗಳ ಖರೀದಿಗೆ ಅಂದು ಯುನೆಸ್ಕೋ 20 ಸಾವಿರ ಡಾಲರ್ ನೆರವು ನೀಡಿತ್ತು. 1975ರವರೆಗೆ ಏಳು ನಗರಗಳಿಗೆ ಮಾತ್ರ ದೂರದರ್ಶನ ಸೇವೆ ನೀಡಲಾಗುತ್ತಿತ್ತು. 

1965ರಲ್ಲಿ ಸುದ್ದಿ ಮತ್ತು ಮನರಂಜನೆ ನೀಡುವ ಕಾರ್ಯಕ್ರಮಗಳ ಪ್ರಸಾರ ಆರಂಭವಾಯಿತು. 1965ರ ಆಗಸ್ಟ್ 15ರಂದು ದೆಹಲಿ ಕೇಂದ್ರದಿಂದ ಒಂದು ಗಂಟೆ ಪ್ರಸಾರ ಮತ್ತು ಪ್ರತಿದಿನ ಒಂದು ಗಂಟೆ ಪ್ರಸಾರ ಆರಂಭವಾಯಿತು. ಮುಂದೆ 1967ರಲ್ಲಿ ಕೃಷಿ ಕಾರ್ಯಕ್ರಮ ‘ಕೃಷಿದರ್ಶನ’ ಪ್ರಸಾರ ಆರಂಭವಾಯಿತು.

ಮುಂದೆ ದೆಹಲಿ ಕೇಂದ್ರದ ಪ್ರಸಾರ ವ್ಯಾಪ್ತಿ 60 ಕಿ.ಮೀ ಗೆ ವಿಸ್ತಾರವಾಯಿತು. 1970ರಲ್ಲಿ ಪ್ರಸಾರದ ಅವಧಿ 3 ಗಂಟೆಗೆ ಏರಿಕೆಯಾಯಿತು. ಆಗ ಇಪ್ಪತ್ತೆರಡು ಸಾವಿರ ಮನೆಗಳಲ್ಲಿ ಟೆಲಿಕ್ಲಬ್ ಗಳಿಲ್ಲದ ದೂರದರ್ಶನ ಸೆಟ್ ಗಳಿದ್ದವು ಎಂದು ಅಂದಾಜಿಸಲಾಗಿದೆ. 

1972ರಲ್ಲಿ ಮುಂಬಯಿ ನಲ್ಲಿ ದೂರದರ್ಶನ ಕೇಂದ್ರವಾಗಿ ಪ್ರಸಾರ ಶುರುವಾಯಿತು. ತದನಂತರ ಪುಣೆ, ಶ್ರೀನಗರ, ಅಮೃತಸರ, 1975ರಲ್ಲಿ ಕಲ್ಕತ್ತ, ಮದ್ರಾಸ್, ಲಖನೌಗಳಲ್ಲಿ ಪ್ರಸಾರ ಆರಂಭವಾಯಿತು. ಮುಂದೆ 1976 ಜನವರಿ 1ರಿಂದ ವಾಣಿಜ್ಯ ಜಾಹೀರಾತುಗಳು ಆರಂಭವಾದವು.

1975-76ರಲ್ಲಿ ಉಪಗ್ರಹ ಶೈಕ್ಷಣಿಕ ಟೆಲಿವಿಷನ್ ಮೂಲಕ ಶೈಕ್ಷಣಿಕ ಪ್ರಸಾರ ಆರಂಭವಾಯಿತು. ಸದ್ಯ ದೇಶದಲ್ಲೀಗ 133 ದೂರದರ್ಶನ ವಾಹಿನಿಗಳಿವೆ. ಹೀಗೆ ದೇಶದಲ್ಲಿ ಆರಂಭವಾದ ದೂರದರ್ಶನ ಪ್ರಸಾರ ರಾಜ್ಯ ಮತ್ತು ಜಿಲ್ಲೆ, ಹಳ್ಳಿಗಳನ್ನೂ ತಲುಪಿತು. ಮುಂದೆ ಕರ್ನಾಟಕಕ್ಕೂ ದೂರದರ್ಶನ ಪ್ರಸಾರ ಲಗ್ಗೆಯಿಟ್ಟಿತು. 

ಇಂದು ದೂರದರ್ಶನ 110 ಡಿಟಿಹೆಚ್ ಸೇವೆಯನ್ನು ಉಚಿತವಾಗಿ ಒದಗಿಸುವುದರ ಜೊತೆಗೆ 36 ಉಪಗ್ರಹ ಚಾನೆಲ್‌ ಗಳನ್ನು ನಿರ್ವಹಿಸುವ ನೆಟ್‌ವರ್ಕ್ ಆಗಿ ಬೆಳೆದಿದೆ. ಆಲ್ ಇಂಡಿಯಾ ರೇಡಿಯೋ 66 ಸ್ಟುಡಿಯೋ ಕೇಂದ್ರಗಳಾಗಿ ದೇಶಾದ್ಯಂತ ಬೆಳೆದಿದೆ. 


ಕರ್ನಾಟಕದಲ್ಲಿ ದೂರದರ್ಶನದ ಉಗಮ

ಕರ್ನಾಟಕದಲ್ಲಿ 1977ರ ಸೆಪ್ಟಂಬರ್ 3 ಮೈಲಿಗಲ್ಲಾಯಿತು. ಅಂದು ಕಲಬುರಗಿಯಲ್ಲಿ ದೂರದರ್ಶನ ಕೇಂದ್ರ ಪ್ರಸಾರ ಶುರುವಾಯಿತು. 1981ರ ಜನವರಿ 1ರಂದು ಮಹಾನಗರಿ ಬೆಂಗಳೂರಲ್ಲಿ ಕೇಂದ್ರವಾಯಿತು. 1988ರಲ್ಲಿ ಜಯಚಾಮರಾಜೇಂದ್ರ ನಗರದಲ್ಲಿ ಸುಸಜ್ಜಿತವಾದ ಸ್ಟುಡಿಯೋ ನಿರ್ಮಾಣ ಮಾಡಲಾಯಿತು.

1983ರ ರಾಜ್ಯೋತ್ಸವದಂದು ಕನ್ನಡ ವಾರ್ತಾ ಪ್ರಸಾರ ಮಾಡಲಾಯಿತು. ಮುಂದೆ 1994ರಲ್ಲಿ ಡಿಡಿ-9 ಉಪಗ್ರಹ ವಾಹಿನಿ ಆರಂಭವಾಗಿ, 2000ದಲ್ಲಿ ‘ಚಂದನ’ ಎಂದು ನಾಮಕರಣಗೊಂಡಿತು. ಮುಂದುವರಿದು ವಿವಿಧ ಕಾರ್ಯಕ್ರಮಗಳ ನೇರ ಪ್ರಸಾರ ಶುರುವಾಯಿತು. 

ದಸರಾ ಉತ್ಸವ, ಧಾರಾವಾಹಿ, ನಾಟಕ, ಕೃಷಿ, ಚಲನಚಿತ್ರ, ಹಾಡು, ಜನಪದ, ಕ್ರಿಕೆಟ್, ವಾರ್ತೆ, ಗ್ರಾಮೀಣ ಮಹಿಳೆಯರಿಗೆ ಮಾಹಿತಿ ಕಾರ್ಯಕ್ರಮಗಳ ಪ್ರಸಾರ ಆರಂಭವಾಯಿತು.

ಮಹಿಳೆಯರಿಗೆಂದೇ 1995ರ ಮಾ. 8ರಂದು ‘ಹಲೋ ಸಹೋದರಿ’ ಕಾರ್ಯಕ್ರಮ, 1984ರಲ್ಲಿ ಮಂಗಳೂರು, ದಾವಣಗೆರೆ, ಬಿಜಾಪುರ, ಬಳ್ಳಾರಿ, ಗದಗ, ಬೆಳಗಾವಿ, ಮೈಸೂರಿನಲ್ಲಿ ಮರುಪ್ರಸಾರ ಕೇಂದ್ರ ಆರಂಭವಾಗಿ ಪ್ರಾದೇಶಿಕ ನೇರ ಪ್ರಸಾರಕ್ಕೆ ಅನುಕೂಲ ಮಾಡಿ ಕೊಡಲಾಯಿತು. ಹೀಗೆ ದೂರದರ್ಶನ ದಿನದಿಂದ ದಿನಕ್ಕೆ ವಿವಿಧ ಕಾರ್ಯಕ್ರಮಗಳ ಪ್ರಸಾರದೊಂದಿಗೆ ದೈತ್ಯಾಕಾರವಾಗಿ ಬೆಳೆಯಿತು.


ವಿಶ್ವ ದೂರದರ್ಶನ ದಿನಾಚರಣೆ

ನವೆಂಬರ್ 21ನ್ನು ವಿಶ್ವ ದೂರದರ್ಶನ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ವಿಶ್ವದ ಮೊದಲ ಟೆಲಿವಿಷನ್ ಫೋರಂ ನವೆಂಬರ್ 21, 1996ರಲ್ಲಿ ನಡೆಯಿತು. ಅಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವ ದೂರದರ್ಶನ ದಿನವನ್ನಾಗಿ ನವೆಂಬರ್ 21ನ್ನು ಆಚರಿಸುವುದಾಗಿ ತೀರ್ಮಾನಿಸಲಾಯಿತು.

ಜನರಲ್ಲಿ ದೂರದರ್ಶನದ ಬಗ್ಗೆ ಜಾಗೃತಿ ಮೂಡಿಸಲು, ಜಾಗತೀಕರದಲ್ಲಿ ದೂರದರ್ಶನ ವಹಿಸುವ ಪಾತ್ರದ ಬಗ್ಗೆ ತಿಳಿಸಲು ಮತ್ತು ಸ್ಥಳೀಯವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮನೆ ಮನೆಗಳಿಗೆ ಉಚಿತ ಹಾಗೂ ಉಪಯುಕ್ತ ಸಂದೇಶ ತಲುಪಿಸುವ ಕಾರ್ಯಗಳು ನಡೆಯತೊಡಗಿದವು.

ಅದಾಗ್ಯೂ ದೂರದರ್ಶನ ದಿನ ಸರ್ಕಾರ, ಸುದ್ದಿ ಸಂಸ್ಥೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ನಿಖರ, ಪಕ್ಷಪಾತ, ಭೇದವಿಲ್ಲದ ರೀತಿಯಲ್ಲಿ ಮಾಹಿತಿಯನ್ನು ಜನರಿಗೆ ತಲುಪಿಸುತ್ತಿರುವುದನ್ನು, ಕಾರ್ಯ ನಿರ್ವಹಣೆ ಬಗ್ಗೆ ದಿನಾಚರಣೆಯಂದು ತಿಳಿಸುತ್ತವೆ. 

ವಿಶ್ವಸಂಸ್ಥೆಯ ವರದಿಯೊಂದರ ಪ್ರಕಾರ, 2017ರಲ್ಲಿ ವಿಶ್ವದಾದ್ಯಂತ ಟಿವಿ ಹೊಂದಿರುವ ಮನೆಗಳ ಸಂಖ್ಯೆ 1.63 ಮಿಲಿಯನ್ ನಷ್ಟಿದೆ. ಅದು 2023ರ ವೇಳೆಗೆ 1.74 ಮಿಲಿಯನ್ ಗೆ ಏರಿಕೆಯಾಗುತ್ತದೆ ಎಂದು ಅಧ್ಯಯನವೊಂದನ್ನು ಉಲ್ಲೇಖಿಸಿ ವಿಶ್ವಸಂಸ್ಥೆ ವರದಿ ಮಾಡಿದೆ.

essay on television in kannada language

ದೂರದರ್ಶನದ ಪ್ರಾಮುಖ್ಯತೆ ಮತ್ತು ಮಹತ್ವ

ಇನ್ನು ದೂರದರ್ಶನದ ಪ್ರಾಮುಖ್ಯತೆ ಹಿಂದಿನ ಕಾಲದಲ್ಲೂ ಇತ್ತು. ಇವಾಗಲೂ ದೂರದರ್ಶನದ ಅವಶ್ಯಕತೆ ಇದೆ. ಉಪಯುಕ್ತ ಮಾಹಿತಿ, ಉತ್ತಮ ಕಾರ್ಯಕ್ರಮಗಳ ಪ್ರಸಾರ ಮತ್ತು ವೀಕ್ಷಣೆಗೆ ದೂರದರ್ಶನ ಇಂದಿಗೂ ಹೆಸರಾಗಿದೆ.

ಸದ್ಯ 21ನೇ ಶತಮಾನದಲ್ಲಿ ನಾವಿದ್ದೇವೆ. ಈಗ ಟಿವಿ ಜೊತೆ ಜೊತೆಗೆ ಸಾವಿರಾರು ಚಾಲನ್ ಗಳು, ಸುದ್ದಿ ಮಾಧ್ಯಮಗಳು, ಮೊಬೈಲ್, ಇಂಟರ್ನೆಟ್ ಗೇಮಿಂಗ್ ಗಳು, ಆ್ಯಪ್ ಗಳು ತುಂಬಿಕೊಂಡಿವೆ. ಕೆಲವು ಟಿವಿ ಚಾನಲ್ ಗಳಲ್ಲಿ ಕಿರುಚಾಡಿ, ಅರಚಾಡುವುದು, ಬೇಕಾಬಿಟ್ಟಿಯಾಗಿ ವ್ಯಕ್ತಿಯ ಖಾಸಗಿತನವನ್ನು ಬಹಿರಂಗಪಡಿಸುವುದು. ಹೀಗೆ ಮುಂತಾದ ವಿಷಯಗಳ ಪ್ರಸಾರ ಆಗುತ್ತಲೇ ಇವೆ.

ದೂರದರ್ಶನ ಅಂದರೆ ಈಗ ಚಂದನ ವಾಹಿನಿಯಾಗಿದೆ. ನಿಜಕ್ಕೂ 24 ಗಂಟೆ ಪ್ರಸಾರವಾಗುವ ಇತರೆ ಟಿವಿ ಚಾನಲ್ ಗಳಿಗಿಂತ ಜನರು ದೂರದರ್ಶನವನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಾರೆ. ಯಾಕೆ ಅನ್ನೋದನ್ನ ಇಲ್ಲಿ ನೋಡೋಣ.

 • ದೂರದರ್ಶನದಲ್ಲಿ ಬರುವ ಶೈಕ್ಷಣಿಕ ಉಪಯುಕ್ತ ಮಾಹಿತಿಗಳು ಮೆಚ್ಚುಗೆಗೆ ಪಾತ್ರವಾಗಿವೆ. ಮಕ್ಕಳಿಗೆ ಓದು, ಅಭ್ಯಾಸಕ್ಕೆ ಬೇಕಾದ ಒಳ್ಳೆಯ ಮಾಹಿತಿ ಸಿಗುತ್ತದೆ. 
 • ತಜ್ಞರ ಸಲಹೆಗಳು, ಮಹಿಳೆಯರ ದೈಹಿಕ, ಮಾನಸಿಕ ಸಮಸ್ಯೆ ಮತ್ತು ಪರಿಹಾರಕ್ಕೆ ವೈದ್ಯಕೀಯ ಕಾರ್ಯಕ್ರಮಗಳು ಮಹಿಳೆಯರು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಲು ಸಹಾಕವಾಗಿದೆ. 
 • ಮನರಂಜನೆ ಕಾರ್ಯಕ್ರಮಗಳಲ್ಲಿ ಅಶ್ಲೀಲವಲ್ಲದ, ಹಾಡು, ನೃತ್ಯಗಳ ಪ್ರಸಾರವಾಗುತ್ತದೆ. 
 • ನಮ್ಮ ಪರಂಪರೆ, ಸಂಸ್ಕೃತಿ, ಪದ್ಧತಿಯನ್ನು ಕಟ್ಟಿ ಕೊಟ್ಟಿರುವ ಮತ್ತು ಬಿಂಬಿಸುವ ಜನಪದ, ಲಾವಣಿ, ನಾಟಕ ತಂಡಗಳಿಂದ ಪ್ರದರ್ಶನ ಕಾರ್ಯಕ್ರಮ ಮನಸೂರೆಗೊಳ್ಳುತ್ತವೆ. 
 • ಕ್ರೀಡೆಯ ಕುರಿತು ನೀಡುವ ಮಾಹಿತಿ, ಸಾಹಿತಿಗಳ, ರಾಜಕಾರಣಿಗಳ ಸಂದರ್ಶನ, ಪ್ರವಾಸೋದ್ಯಮ ಹಾಗೂ ಪ್ರವಾಸಿ ತಾಣಗಳ ಕುರಿತಾದ ಮಾಹಿತಿಯಿಂದಾಗಿ ದೂರದರ್ಶನ ಇಂದಿಗೂ ಜನಮಾನಸದಲ್ಲಿ ಬೆರೆತಿದೆ.  

ಚಂದನ ಟಿವಿ ಪ್ರಭಾವ

ಡಿಡಿ ಚಂದನ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದೆ. ಟಿವಿಯಲ್ಲಿನ ಕಾರ್ಯಕ್ರಮಗಳು ಜನಸ್ನೇಹಿಯಾಗಿ, ಮಾಹಿತಿ ನೀಡುವುದು, ಪಕ್ಷಪಾತವಿಲ್ಲದೆ ಸುದ್ದಿ ಪ್ರಸಾರ, ಪಾರಂಪರಿಕ ಜನಪದ ಕಾರ್ಯಕ್ರಮಗಳ ಪ್ರಸಾರ ಜನರನ್ನು ರಂಜಿಸುತ್ತಿವೆ.

ಡಿಡಿ ಚಂದನ ತನ್ನದೇ ಆದ ವೀಕ್ಷಕರನ್ನು ಹೊಂದಿದೆ. ಯಾವುದೇ ಅತಿಶಯೋಕ್ತಿಯಿಲ್ಲದೆ, ನಮ್ಮಲ್ಲೇ ಮೊದಲು ಎಂಬ ಅಬ್ಬರವಿಲ್ಲದೆ ವಿಷಯ ನಿರೂಪಣೆ ಮಾಡಲಾಗುತ್ತದೆ. ಸಾಹಿತ್ಯಿಕ, ಕೃಷಿ ಕಾರ್ಯಕ್ರಮಗಳು ರೈತರಿಗೆ ಮಾರ್ಗದರ್ಶಿಯಾಗಿವೆ.

ರಾಜ್ಯಸಭೆ ಮತ್ತು ಲೋಕಸಭೆ ಕಲಾಪದ ನೇರ ಪ್ರಸಾರ ಜನರಿಗೆ ರಾಜಕಾರಣಿಗಳು ಮಂಡಿಸುವ ವಿಷಯದ ಕುರಿತು ಮಾಹಿತಿ ನೀಡುತ್ತದೆ. ಇನ್ನು ಕೊರೊನಾ ಹಿನ್ನೆಲೆ ಮಕ್ಕಳಿಗೆ ಟಿವಿ ಮೂಲಕ ಪಾಠಗಳ ಪ್ರಸಾರವನ್ನೂ ಮಾಡಲಾಗಿದೆ. ಒಟ್ಟಿನಲ್ಲಿ ಡಿಡಿ ಚಂದನದ ಪ್ರಭಾವ ಜನರ ಮನಸ್ಸಲ್ಲಿ ಒಳ್ಳೆಯ ಮನೋಭಾವನೆ, ಪಾಸಿಟಿವಿಟಿಗೆ ಕಾರಣವಾಗಿದೆ. 


ದೂರದರ್ಶನದಿಂದ ಮಕ್ಕಳ ಮೇಲಾದ ದುಷ್ಪರಿಣಾಮಗಳು

ಈ ಹಿಂದೆ ಕಡಿಮೆ ಕಾರ್ಯಕ್ರಮಗಳ ಪ್ರಸಾರದಿಂದಾಗಿ ಜನರು ಕೆಲ ಸಮಯವನ್ನು ಮಾತ್ರ ಟಿವಿ ಮುಂದೆ ಕಳೆಯುತ್ತಿದ್ದರು. ಆದರೆ ಈಗ 24 ಗಂಟೆಯೂ ಹೊಸ ಹೊಸ ಕಾರ್ಯಕ್ರಮ, ಶೈಕ್ಷಣಿಕ ಮಾಹಿತಿ, ಗೇಮಿಂಗ್, ಕಾರ್ಟೂನ್ ಗಳು ಚಾಲನ್ ಗಳ ಮೂಲಕ ಆವರಿಸಿಕೊಂಡಿವೆ.

ಈ ರೀತಿಯ ಮನರಂಜನಾತ್ಮಕ ಕಾರ್ಯಕ್ರಮಗಳಿಂದಾಗಿ ಮಕ್ಕಳು ಹೆಚ್ಚು ಸಮಯವನ್ನು ಟಿವಿ ಮುಂದೆ ಕಳೆಯುತ್ತಿದ್ದಾರೆ. ಹೀಗೆ ಹೆಚ್ಚು ಟಿವಿ ನೋಡುವುದರಿಂದ ಮಕ್ಕಳ ಮೇಲೆ ಯಾವ ಪರಿಣಾಮಗಳು ಉಂಟಾಗುತ್ತವೆ ಎಂಬುದನ್ನು ಇಲ್ಲಿ ನೋಡೋಣ.

 • ದಿನ ನಿತ್ಯದ ಹೆಚ್ಚು ಸಮಯವನ್ನು ಮಕ್ಕಳು ಟಿವಿ ಎದುರು ಕಳೆಯುವುದರಿಂದ ಓದಿನ ಕಡೆಗೆ ಆಸಕ್ತಿ ಕಡಿಮೆಯಾಗುತ್ತದೆ. 
 • ಆರೋಗ್ಯದ ಮೇಲೆ ಪರಿಣಾಮ ಬೀರಿ, ದೃಷ್ಟಿ ದೋಷ, ದೃಷ್ಟಿ ಮಂದವಾಗುವುದು, ಜಾಗರೂಕತೆಯ ಕೊರತೆಗೆ ಕಾರಣವಾಗುತ್ತದೆ. 
 • ಟಿವಿಯಲ್ಲಿ ಬರುವ ಕೆಲ ಪಾತ್ರಗಳಿಂದ ಪ್ರೇರಿತಗೊಂಡು ಅವರಂತೆ ಆಗಲು ಯತ್ನಿಸುವುದು, ಅಪಾಯದ ಕೆಲಸಗಳಿಗೆ ಕೈ ಹಾಕುವ ಮತ್ತು ಸ್ಟಂಟ್ ಮಾಡಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಳ್ಳುವ ಅಪಾಯ ಹೆಚ್ಚಿರುತ್ತದೆ. 
 • ಇನ್ನು ತುಂಬಾ ಸಮಯ ಟಿವಿ ನೋಡುವ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಇತರೆ ವಿಷಯಗಳ ಕಡೆಗೆ ಗಮನ ಕೊಡುವುದು, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. 
 • ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ವೀಕ್ ಆಗುತ್ತಾರೆ. ದೊಡ್ಡವರಾಗುತ್ತಿದ್ದಂತೆ ಕೆಟ್ಟ ಜೀವನಶೈಲಿಯನ್ನು ಅಳವಡಿಸಿಕೊಂಡು ಭವಿಷ್ಯವನ್ನು ಹಾಳು ಮಾಡಿಕೊಳ್ಳುವ ಅಪಾಯವಿದೆ. 

ಡಿಡಿ ಚಂದನದ ಕಾರ್ಯಕ್ರಮಗಳು 

ಕರ್ನಾಟಕದಲ್ಲಿ ಡಿಡಿ 9 ವಾಹಿನಿ 1999ರಲ್ಲಿ ‘ಚಂದನ’ ವಾಹಿನಿಯಾಗಿ ಮರುನಾಮಕರಣಗೊಂಡಿತು. ಮೊದಲು ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಮಧ್ಯಾಹ್ನ 3 ರಿಂದ ರಾತ್ರಿ 8 ಗಂಟೆಯವರೆಗೆ ಪ್ರಸಾರ ನಡೆಯುತ್ತಿತ್ತು.

ನಂತರ ರಾಷ್ಟ್ರೀಯ ಜಾಲದ ಕಾರ್ಯಕ್ರಮಗಳ ಪ್ರಸಾರ ಮಾಡಲಾಗುತ್ತಿತ್ತು. ಈಗ ಚಂದನ ವಾಹಿನಿಯಲ್ಲಿ ಬೆಳಗ್ಗೆ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪ್ರಸಾರ ಕೆಲಸ ನಡೆಯುತ್ತದೆ. 

ದಿನವೂ ಚಂದನ ವಾಹಿನಿಯಲ್ಲಿ ಹತ್ತಾರು ಕಾರ್ಯಕ್ರಮಗಳ ಪ್ರಸಾರ ನಡೆಯುತ್ತದೆ. ದೈನಂದಿನ ಧಾರಾವಾಹಿಗಳು, ಮನರಂಜನಾ ಕಾರ್ಯಕ್ರಮಗಳು, ಕೃಷಿ ದರ್ಶನ, ಚಿತ್ರಮಂಜರಿ, ಥಟ್ ಅಂತ ಹೇಳಿ, ಸೊಡರ ಸಿರಿ, ವಾರ್ತೆಗಳು, ಗ್ರಾಮೀಣ ಭಾರತ, ಹೊಸ ಮಿಂಚು, ಸತ್ಯ ದರ್ಶನ, ಮಧುರ ಮಧುರವೀ ಮಂಜುಳಗಾನ ಕಾರ್ಯಕ್ರಮಗಳು ಪ್ರಸಾರಗೊಳ್ಳುತ್ತವೆ.


advantages and disadvantages of television essay in kannada

ದೂರದರ್ಶನದ ಉಪಯೋಗಗಳು

 • ದೂರದರ್ಶನ ಹೆಚ್ಚಾಗಿ ಶೈಕ್ಷಣಿಕ ಕಾರ್ಯಕ್ರಮಗಳ ಪ್ರಸಾರ ಮಾಡುವುದರಿಂದ ಮಕ್ಕಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯಕವಾಗುತ್ತದೆ. ವಿವಿಧ ವಿಷಯಗಳ ಬಗೆಗಿನ ಜ್ಞಾನ, ತಿಳಿವಳಿಕೆಯನ್ನು ಹೆಚ್ಚಿಸುತ್ತದೆ. ಉಪಯುಕ್ತ ಮಾಹಿತಿ ಸಿಗುತ್ತದೆ. 
 • ಜಗತ್ತಿನಲ್ಲಿ ನಡೆಯುತ್ತಿರುವ ಆಗು-ಹೋಗುಗಳು, ಘಟನೆಗಳು, ರಾಜಕೀಯ ಮತ್ತು ಸಾಮಾಜಿಕ ಚಟುವಟಿಕೆಗಳ ಮಾಹಿತಿ ಸಿಗುತ್ತದೆ. 
 • ವಿವಿಧ ರೀತಿಯ ಖಾದ್ಯಗಳ ತಯಾರಿಕೆ, ವೈವಿಧ್ಯಮಯ ಅಡುಗೆ ಕಾರ್ಯಕ್ರಮ ಪ್ರಸಾರದಿಂದ ವೆರೈಟಿ ಖಾದ್ಯಗಳ ಪರಿಚಯವಾಗುತ್ತದೆ. 
 • ಚಿತ್ರ ಬಿಡಿಸುವುದು, ಕ್ರಾಪ್ಟ್ ತಯಾರಿಕೆ, ವಸ್ತುಗಳನ್ನು ರಿಯೂಸ್ ಮಾಡುವ ವಿಧಾನ ಹಾಗೂ ಬಟ್ಟೆ ಹೊಲಿಯುವ ವಿಶೇಷ ತಿಳಿವಳಿಕೆಯೂ ಸಿಗುತ್ತದೆ. 
 • ಸಾಕ್ಷ್ಯ ಚಿತ್ರಗಳು, ಧಾರಾವಾಹಿಗಳು, ಸಾಧಕರ ಜೀವನಚರಿತ್ರೆ ಪ್ರಸಾರ, ಕವಿಗೋಷ್ಠಿ, ಹಾಡು, ನೃತ್ಯ, ಒಲಿಂಪಿಕ್ಸ್ , ಕಲಾಪ ನೇರ ಪ್ರಸಾರ ಕಾರ್ಯಕ್ರಮಗಳ ಪ್ರಸಾರ ಅನುಕೂಲಕರವಾಗಿದೆ. 
 • ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ, ಶಿಲ್ಪಕಲೆ ಮತ್ತು ಭಾಷೆಗಳ ಬಗ್ಗೆ ತಿಳಿವಳಿಕೆ, ಆರೋಗ್ಯ, ಯೋಗ, ಧ್ಯಾನದ ಕುರಿತ ಮಾಹಿತಿ ಸಿಗುತ್ತದೆ. ಯೋಗದ ಭಂಗಿಗಳು, ಯೋಗದಿಂದ ದೇಹಕ್ಕಾಗುವ ಒಳಿತಿನ ಕುರಿತು ಮಾಹಿತಿ ಸಿಗುತ್ತದೆ. 
 • ಮನರಂಜನೆಗಾಗಿ ಆಟ, ಚಲನಚಿತ್ರ, ವೈರಲ್ ವಿಡಿಯೋ, ಹಾಸ್ಯ ಕಾರ್ಯಕ್ರಮಗಳನ್ನೂ ನೋಡಬಹುದು. 
 • ಇನ್ನು ದೂರದರ್ಶನ ಅದೆಷ್ಟೋ ಜನರಿಗೆ ಉದ್ಯೋಗ ನೀಡಿದೆ. ವಿವಿಧ ರಂಗದ ಜನರನ್ನು ತನ್ನೊಳಗೆ ಇರಿಸಿಕೊಂಡಿದೆ. ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. 

ಹೀಗೆ ದೂರದರ್ಶನ ನಮಗೆಲ್ಲಾ ವರದಾನವಾಗಿ ಮಾರ್ಪಟ್ಟಿದೆ. 

ದೂರದರ್ಶನದ ಅನಾನುಕೂಲತೆಗಳು

 • ಮಕ್ಕಳು ಮತ್ತು ವಯಸ್ಕರರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಟಿವಿಯಲ್ಲಿ ಬರುವ ಅಕ್ರಮಣಕಾರಿ ನೀತಿ, ಹಿಂಸಾತ್ಮಕ ಘಟನೆಗಳು, ಭಯಾನಕ ಸ್ಥಳಗಳು, ಗ್ರಾಫಿಕ್ಸ್ ಇದು ಜನರ ಮೇಲೆ ಕೆಟ್ಟ ಮನಸ್ಥಿತಿ ಉಂಟು ಮಾಡಲು ಪ್ರಚೋದನೆ ನೀಡುತ್ತದೆ. 
 • ಯಾವಾಗಲೂ ಕುಳಿತೇ ದೂರದರ್ಶನ ನೋಡುವುದರಿಂದ ದೈಹಿಕ ಚಟುವಟಿಕೆಯಿಲ್ಲದೆ ಬೊಜ್ಜು ಬೆಳೆಯುತ್ತದೆ. ಮಾನಸಿಕ ಆರೋಗ್ಯವೂ ಹದಗೆಡುತ್ತದೆ. ಕಣ್ಣಿನ ದೋಷ , ನಿದ್ರಾಹೀನತೆ ಉಂಟಾಗುವ ಸಾಧ್ಯತೆಗಳು ಹೆಚ್ಚು. 
 • ಸಮಯ ವ್ಯರ್ಥ ಮಾಡುತ್ತದೆ. ಕುಟುಂಬ, ಸಂಬಂಧಿಕರೊಂದಿಗಿನ ಒಡನಾಟ, ಓಡಾಟ ಕಡಿಮೆಯಾಗುತ್ತದೆ. ಇತರೆ ವಿಷಯಗಳ ಬಗ್ಗೆ ಆಸಕ್ತಿ ಕಡಿಮೆಯಾಗುತ್ತದೆ. ಟಿವಿಯಲ್ಲಿ ಪ್ರಸಾರವಾಗುವ ಧಾರಾವಾಹಿ, ಘಟನೆಗಳು ಮನಸ್ಸಲ್ಲಿ ಉಳಿದು ಬಿಡುತ್ತವೆ. ಪ್ರೀತಿಪಾತ್ರರೊಂದಿಗೆ ಸಂವಹನ ಮಾಡಲು ಸಾಧ್ಯವಾಗುವುದಿಲ್ಲ. 
 • ಮನರಂಜನೆ ನೀಡುವ ಚಾನಲ್ ಗಳನ್ನು ಬ್ರೌಸ್ ಮಾಡುವುದರಲ್ಲೇ ಸಮಯ ಹಾಳಾಗುತ್ತದೆ. ಜಾಹೀರಾತುಗಳ ಪರಿಣಾಮ ಕಾಸ್ಮೆಟಿಕ್ಸ್ ವಸ್ತುಗಳ ಬಳಕೆ ಹೆಚ್ಚಾಗುವ ಆತಂಕವೂ ಇದೆ. 

ಉಪಸಂಹಾರ

ಒಟ್ಟಿನಲ್ಲಿ ಹಲವು ಉಚಿತ ಹಾಗೂ ಅನುಚಿತ ವಿಷಯಗಳಿಂದ, ಮನರಂಜನೆಯ ಭಾಗವಾಗಿ ನಮ್ಮನ್ನು ಆವರಿಸಿರುವ ಟಿವಿ ಒಳಿತು ಹಾಗೂ ಕೆಡುಕು ಎರಡನ್ನೂ ಹೊಂದಿದೆ. ‘ಅತಿಯಾದರೆ ಅಮೃತವೂ ವಿಷ’ ಎಂಬಂತೆ ದಿನದ ಸ್ವಲ್ಪ ಸಮಯವನ್ನು ಟಿವಿ ಮುಂದೆ ಕಳೆಯುವುದು ಒಳ್ಳೆಯದು.

ಆದರೆ ಇಡೀ ದಿನ ಟಿವಿ ಮುಂದೆ ಕುಳಿತು ಅದನ್ನೇ ಜಗತ್ತು ಮಾಡಿಕೊಂಡರೆ ಆರೋಗ್ಯಕ್ಕೆ ಹಾನಿ ಕಟ್ಟಿಟ್ಟ ಬುತ್ತಿ. ಕಪ್ಪು-ಬಿಳುಪಿನಿಂದ ಆರಂಭಗೊಂಡ ಟಿವಿ ಎಂಬ ಮಾಯಾ ಜಗತ್ತು ಇಂದು ಬಣ್ಣ ಬಣ್ಣದಿಂದ ರಂಗು ರಂಗಾಗಿದೆ.

ಒಂದು ಕಾಲದಲ್ಲಿ ಊರಿಗೊಂದು ಎಂಬಂತಿದ್ದ ಟಿವಿಗಳು ಇಂದು, ಹೈ ಕ್ವಾಲಿಟಿ ಡಿಜಿಟಲ್ ಸ್ಕ್ರೀನ್ ಹೊಂದಿರುವ 32, 24, 36 ಇಂಚಿನ ಟಿವಿಗಳು ಇಂದು ಎಲ್ಲರ ಮನೆಯಲ್ಲೂ ಕಾಣಸಿಗುತ್ತವೆ. ಟಿವಿ ನಿಮ್ಮ ಮನೆ ಹಾಗೂ ಮನದಲ್ಲಿ ಎಷ್ಟರ ಮಟ್ಟಿ ಛಾಪು ಮೂಡಿಸಿದೆ ಎಂಬುದನ್ನ ನೀವೂ ಒಮ್ಮೆ ಅವಲೋಕಿಸಿಕೊಂಡು ಬಿಡಿ.

FAQ on Television Essay In Kannada

Q1. ವಿಶ್ವ ದೂರದರ್ಶನ ದಿನಾಚರಣೆ ಯಾವಾಗ ಆಚರಿಸಲಾಗುತ್ತದೆ?

ಪ್ರತಿವರ್ಷ ನವಂಬರ್ ೨೧ ರಂದು ವಿಶ್ವ ದೂರದರ್ಶನ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಈ ದಿನವು ದೃಶ್ಯ ಮಾಧ್ಯಮದ ಶಕ್ತಿ ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ಹಾಗೂ ವಿಶ್ವ ರಾಜಕೀಯದ ಮೇಲೆ ದೂರದರ್ಶನವು ಯಾವ ರೀತಿ ಪ್ರಭಾವ ಬೀರಲು ಸಹಾಯ ಮಾಡುತ್ತದೆ ಎಂಬುದನ್ನು ಸ್ಮರಿಸುತ್ತದೆ.

Q2. ಇಲೆಕ್ಟ್ರಾನಿಕ್ ದೂರದರ್ಶನವನ್ನು ಕಂಡುಹಿಡಿದ ವಿಜ್ಞಾನಿ ಯಾರು?

ಫಿಲೋ ಫಾರ್ನ್ಸ್‌ವರ್ತ್ ಎಂಬ ವಿಜ್ಞಾನಿ ಆಗಸ್ಟ್ 25, 1934 ರಂದು ಆಲ್-ಎಲೆಕ್ಟ್ರಾನಿಕ್ ಟೆಲಿವಿಷನ್ ಸಿಸ್ಟಮ್‌ನ ಪ್ರಪಂಚದ ಮೊದಲ ಸಾರ್ವಜನಿಕ ಪ್ರದರ್ಶನವನ್ನು ನೀಡಿದರು.

Q3. Who invented television in Kannada?

John Logie Baird invented the television.

Television Essay In Kannada ಎಂಬ ದೂರದರ್ಶನ ಬಗ್ಗೆ ಪ್ರಬಂಧವನ್ನು ಕನ್ನಡಲ್ಲಿ ಬರೆಯುವ ಪ್ರಯತ್ನ ಇದಾಗಿತ್ತು.

ಈ ಲೇಖನದ ಕುರಿತಂತೆ ನಿಮ್ಮ ನಿಲುವು ಅಥವಾ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.

ಈ ಕೆಳಗಿನ ಪ್ರಬಂಧಗಳನ್ನೂ ಓದಿ.

ಕ್ರೀಡೆಗಳ ಮಹತ್ವ ಪರಿಸರ ಸಂರಕ್ಷಣೆ
ಪ್ರಬಂಧ ಹೇಗೆ ಬರೆಯಬೇಕು?ಕೃತಕ ಬುದ್ಧಿಮತ್ತೆ

Leave a Comment

error: Content is protected !!